
ಬೆಂಗಳೂರು: ಕಾಂತಾರ ಚಾಪ್ಟರ್-1 ಸಿನಿಮಾಗೆ ದೇಶಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಆರಂಭಕ್ಕೂ ಮುನ್ನವೇ ಚಿತ್ರತಂಡ ಚಿತ್ರದಲ್ಲಿ ಬರುವ ದೈವ ನೃತ್ಯವನ್ನು ಅನುಕರಣೆ ಮಾಡದಂತೆ ಮನವಿ ಮಾಡಿದ್ದರೂ, ಇದಕ್ಕೆ ತದ್ವಿರುದ್ಧವಾದ ಘಟನೆಗಳು ನಡೆಯುತ್ತಿದೆ.
ಸಿನಿಮಾದಲ್ಲಿ ದೈವದ ಅಂಶ ಜನರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಕೆಲವೆಡೆ ಪ್ರೇಕ್ಷಕರು ಭಾವೋದ್ವೇಗಕ್ಕೆ ಒಳಗಾಗಿ ದೈವ ನೃತ್ಯವನ್ನು ಅನುಕರಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.
ಈಗ ಇಂಥಹದ್ದೇ ಘಟನೆಯೊಂದು ವರದಿಯಾಗಿದ್ದು, ದೈವದ ಅನುಕರಣೆ ಮಾಡಿದ ವ್ಯಕ್ತಿಯೋರ್ವ ಕ್ಷಮೆ ಕೇಳಿದ್ದಾನೆ. ಸಿನಿಮಾ ರಿಲೀಸ್ ಆದ ಬಳಿಕ ವ್ಯಕ್ತಿಯೊಬ್ಬನು ಥಿಯೇಟರ್ನ ಹೊರ ಭಾಗದಲ್ಲಿ ದೈವ ಬಂದಂತೆ ವರ್ತಿಸಿದ್ದ ವಿಡಿಯೋ ವೈರಲ್ ಆಗಿತ್ತು. ‘ರಿಷಬ್ ಅವರಲ್ಲಿ ದೇವರನ್ನು ನೋಡಿದೆ’ ಎಂದೆಲ್ಲ ಆತ ಹೇಳಿಕೊಂಡಿದ್ದ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಈ ವಿಡಿಯೋ ವ್ಯಾಪಕ ಟೀಕೆ ವಿರೋಧಕ್ಕೆ ಗುರಿಯಾಗಿತ್ತು. ಈ ರೀತಿ ನಡೆದುಕೊಳ್ಳುವುದು ದೈವಕ್ಕೆ ಮಾಡುವ ಅವಮಾನ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ವ್ಯಕ್ತಿ, ಕ್ಷಮೆ ಕೇಳಿದ್ದಾನೆ.
ಕಳೆದ ಕೆಲವು ದಿನಗಳಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗಿದೆ, ಈ ರೀತಿ ಯಾರೂ ಮಾಡಲು ಹೋಗಬೇಡಿ ಎಂದು ಕೋರಿದ್ದಾನೆ. ‘ನನ್ನ ಹೆಸರು ವೆಂಕಟ್. ಇತ್ತೀಚೆಗೆ ವೈರಲ್ ಆದ ವಿಡಿಯೋವನ್ನು ನಾನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ರಿಷಬ್ ಶೆಟ್ಟಿ, ಕಾಂತಾರ ಟೀಮ್ ಬಳಿ ಕ್ಷಮೆ ಕೋರುತ್ತೇನೆ. ತುಳು ನಾಡಿನ ಜನತೆಗೆ ಕ್ಷಮೆ ಕೋರುತ್ತೇನೆ. ಈ ಘಟನೆ ಆದಾಗಿನಿಂದ ನೆಮ್ಮದಿ-ಶಾಂತಿ ಇಲ್ಲ. ನನ್ನನ್ನು ಕ್ಷಮಿಸಿ’ ಎಂದು ಆತ ಮನವಿ ಮಾಡಿದ್ದಾನೆ.
ಈತನ ವಿಡಿಯೋವನ್ನು ಖಂಡಿಸಿದ್ದ ಅನೇಕರು "ದೈವಾರಾಧನೆ ಮಾಡಲು ಅದರದ್ದೇ ಆದ ಪದ್ದತಿ ಇರುತ್ತದೆ. ಆ ಪದ್ಧತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಆ ಆಚರಣೆಗೆ ಮಾಡುವ ಅವಮಾನ ಆಗುತ್ತದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Advertisement