
ಬೆಂಗಳೂರು : ಭಾರತದ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮೇಲೆ ಸುಪ್ರೀಂಕೋರ್ಟ್ ಆವರಣದಲ್ಲೇ ಹಿರಿಯ ವಕೀಲರೊಬ್ಬರು ಶೂ ಎಸೆದ ಪ್ರಕರಣ ವಿದ್ಯಮಾನ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಿಡಿಕಾರಿದ್ದಾರೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಶೂ ದಾಳಿಯು ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ ಪ್ರಧಾನ ಮಂತ್ರಿಗಳು. ಘಟನೆ ನಡೆದಿದ್ದು ಬೆಳಗ್ಗೆ 11.30 ಗಂಟೆ ಸುಮಾರಿಗೆ, ಮೋದಿಯವರು ಕೆರಳಿ ಪ್ರತಿಕ್ರಿಯೆ ನೀಡಿದ್ದು ರಾತ್ರಿ 8.29ಗಂಟೆಗೆ!
ಮೋದಿಯವರು ಕೆರಳುವುದಕ್ಕೆ ಸುದೀರ್ಘ 9 ಗಂಟೆಗಳ ಅವಧಿ ಹಿಡಿಯಿತು. ಅದೇ ಕ್ರಿಕೆಟ್ ಪಂದ್ಯದ ವಿಷಯವಾಗಿದ್ದರೆ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯರನ್ನೂ ಕೆರಳಿಸಿದೆ ಎಂದಿದ್ದಾರೆ, ಆದರೆ ದೇಶದ ಗೃಹ ಸಚಿವ ಅಮಿತ್ ಶಾ ಕೆರಳಲಿಲ್ಲ, ಖಂಡಿಸಲಿಲ್ಲ ಎಂದು ಸಹ ಕಿಡಿಕಾರಿದ್ದಾರೆ.
ಮನುವಾದದ ಪ್ರವರ್ತಕರು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ತನ್ನ 'ಶೂ' ಎಸೆದಿದ್ದಾರೆ. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯದ ಮೇಲಿನ ದಾಳಿ, ಸಂವಿಧಾನದ ಮೇಲಿನ ದಾಳಿ. ಮನುವಾದಿಗಳ ಈ ಮನಸ್ಥಿತಿಯ ಪ್ರೋತ್ಸಾಹಕರು ಯಾರು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಇದು ಕೇವಲ ಶೂ ದಾಳಿಯಲ್ಲ, ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿ. ಸಂವಿಧಾನದ ಮೇಲೆ ಮನುವಾದಿಗಳಿಗೆ ಇರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಎಂದಿದ್ದಾರೆ.
ದಾಳಿಯನ್ನು ಬಿಜೆಪಿ ಹಾಗೂ ಸಂಘಪಾರಿವಾರದ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ, ಇವರನ್ನು ನೋಡಿ ಮೋದಿಯವರು ಕೆರಳಲಿಲ್ಲ. ಮತಗಳ್ಳತನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾಗ ಮಳೆಗಾಲದ ಕಪ್ಪೆಗಳಂತೆ ವಟಗುಟ್ಟಿದ್ದ ಬಿಜೆಪಿಯವರು ಈಗೇಕೆ ಮೌನವಾಗಿದ್ದಾರೆ? ಸಂವಿಧಾನದ ಘನತೆ, ನ್ಯಾಯಾಲಯದ ಪಾವಿತ್ರ್ಯತೆ ಬಿಜೆಪಿಗೆ ಮುಖ್ಯವಲ್ಲವೇ? ಇದು ಕೇವಲ ವ್ಯಕ್ತಿಯೊಬ್ಬ ವ್ಯಕ್ತಿಯ ಮೇಲೆ ನಡೆಸಿದ ದಾಳಿಯಲ್ಲ, ಮೋದಿಯವರೇ ಪಾಲಿಸಿ ಪೋಷಿಸುತ್ತಿರುವ ವಿಚಾರಧಾರೆಯು ಸಂವಿಧಾನದ ಮೇಲೆ ನಡೆಸಿದ ದಾಳಿ ಎಂದಿದ್ದಾರೆ.
Advertisement