

ಕೊಪ್ಪಳ: ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಸ್ಥಳೀಯ ಬಿಜೆಪಿ ಯುವ ಮೋರ್ಚಾ ನಾಯಕ ವೆಂಕಟೇಶ್ ಕುರುಬರ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
2003 ರಲ್ಲಿ ನಡೆದ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದ ಕಾರಣಕ್ಕಾಗಿ 31 ವರ್ಷದ ಯುವ ಮೋರ್ಚಾ ಅಧ್ಯಕ್ಷರ ಹತ್ಯೆ ಮಾಡಲಾಗಿದೆ ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಹೇಳಿದ್ದಾರೆ.
2003 ರಲ್ಲಿ, ಸ್ನೇಹಿತನ ಪ್ರಕರಣದಲ್ಲಿ, ವೆಂಕಟೇಶ್ ಇದರಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿದ್ದರು.
ನಾವು ಎಲ್ಲಾ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಎಸ್ಪಿ ರಾಮ್ ಎಲ್ ಅರಸಿದ್ದಿ ಹೇಳಿದರು.
ವೆಂಕಟೇಶ್ ಕುರುಬರ ಅವರು ಮಂಗಳವಾರ ದೇವಿ ಕ್ಯಾಂಪ್‌ನಿಂದ ಗಂಗಾವತಿಗೆ ಬರುತ್ತಿದ್ದಾಗ ಜನರ ಗುಂಪೊಂದು ಅವರ ಮೇಲೆ ಮಚ್ಚುಗಳಿಂದ ದಾಳಿ ಮಾಡಿ ಕೊಚ್ಚಿ ಕೊಂದಿದೆ. ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂದೆ ಈ ಘಟನೆ ಸಂಭವಿಸಿದೆ.
ದೇವಿಕ್ಯಾಂಪ್‌ನಿಂದ ಗಂಗಾವತಿಗೆ ವೆಂಕಟೇಶ್ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್ ಸದಸ್ಯರು ಬೈಕಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆ ಮಾಡಲು ಬಳಸಿದ ಕಾರು ಪತ್ತೆ
ವೆಂಕಟೇಶ ಕೊಲೆ ಮಾಡಲು ಆರೋಪಿಗಳು ಬಳಕೆ ಮಾಡಿದ ಟಾಟಾ ಇಂಡಿಕಾ KA 01 AC 8729 ನಂಬರ್‌ನ ಕಾರು ಗಂಗಾವತಿಯ ಎಚ್ ಆರ್ ಎಸ್ ಕಾಲೋನಿಯಲ್ಲಿ ಪತ್ತೆಯಾಗಿದೆ. ಆರೋಪಿಗಳು ಬೆಂಗಳೂರು ಪಾಸಿಂಗ್ ಇರುವ ಕಾರು ಬಳಕೆ ಮಾಡಿದ್ದಾರೆ. ಕಾರ್ ಟೈರ್ ಬ್ಲಾಸ್ಟ್ ಆಗಿದ್ದರಿಂದ ಕಾರು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಕಾರಿನಲ್ಲಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಸ್ಥಳಕ್ಕೆ ಬೆರಳಚ್ಚು, ಶ್ವಾನದಳ ತಂಡದೊಂದಿಗೆ ತನಿಖೆ ಮುಂದುವರಿದಿದೆ.
ಬಿ.ವೈ. ವಿಜಯೇಂದ್ರ ಸಂತಾಪ
ಏತನ್ಮಧ್ಯೆ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವೇಕಟೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, "ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದ ವೆಂಕಟೇಶ್ ಅವರ ದುರಂತ ನಿಧನದ ಸುದ್ದಿ ಹೃದಯ ವಿದ್ರಾವಕವಾಗಿದೆ. ಮೃತರ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ವೆಂಕಟೇಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮತ್ತು ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ."
Advertisement