
ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಕ್ಷೇಪ ಎತ್ತಿದ ಉಗ್ರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಷರತ್ತುಗಳನ್ನು ವಿಧಿಸಿದ್ದಾರೆ. ನನ್ನ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ.
ತಟ್ಟೆ, ಊಟ ತಾರದೆ ಬಂದರೆ ಜನರ ಧ್ವನಿಯಾಗಿ ಹೋರಾಡಲು ಸಿದ್ಧನಿದ್ದೇನೆ ಎಂದೂ ಎಚ್ಚರಿಸಿದರು. ಯಾರೇ ತಪ್ಪು ಮಾಡಿದರೂ ಅವರ ಮುಖಕ್ಕೆ ಹೇಳುತ್ತೇನೆ ಎಂದು ಉಗ್ರಪ್ಪ ಹೇಳಿದರು.
ಬೊಮ್ಮಾಯಿ ಅವರು ಕುರುಬರನ್ನು ಎಸ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದರು. ನನ್ನ ಸಮಾಜ ಸ್ವಾರ್ಥಿ ಆಗಲು ಸಿದ್ಧರಿಲ್ಲ. ಆದರೆ, ನನ್ನ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ. ನೀವು ನಮ್ಮ ಜತೆಯಲ್ಲಿ ಸಹಪಂಕ್ತಿಯಲ್ಲಿ ಕೂರಬೇಕು ಎಂದುಕೊಂಡಿದ್ದರೆ ನಮ್ಮ 3 ಷರತ್ತುಗಳನ್ನು ಪೂರೈಸಿ. ಮುಂದೊಂದು ದಿನ ನಾಯಕ ಸಮಾಜದವರು ರಾಜ್ಯದ ಸಿಎಂ ಆಗಬೇಕು. ಅಧಿಕಾರ ಶಾಶ್ವತ ಅಲ್ಲ ಎಂದರು.
ಸಿದ್ದರಾಮಯ್ಯ ಅವರೇ ನೀವು ಎಷ್ಟು ದಿನ ಸಿಎಂ ಆಗಿದ್ದರೂ ಒಂದಲ್ಲ ಒಂದು ದಿನ ಮಾಜಿ ಆಗುತ್ತೀರಿ. ನಿಮ್ಮ ವಿಚಾರಧಾರೆಯ ರಥ ಎಳೆಯುವ ಜನರನ್ನು ಗುರುತಿಸಿ, ಹೊಸ ರಾಜಕೀಯ ಅಧ್ಯಾಯ ಸೃಷ್ಟಿಸಿ. ನಮ್ಮೊಟ್ಟಿಗೆ ನಿಮ್ಮ ತಟ್ಟೆ, ಊಟ ತಂದು ಜತೆಯಲ್ಲಿ ಕುಳಿತು ತಿನ್ನಿ ಎಂದಿದ್ದಾರೆ.
ಕುರುಬರನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡುವುದಕ್ಕೂ ಮುನ್ನ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಕುರುಬರು ಬುಡಕಟ್ಟು ಸಮುದಾಯಕ್ಕೆ ಸೇರಿದವರೇ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು.
ಕುರುಬರು ಒಬಿಸಿಯಿಂದ ಎಸ್ಟಿಗೆ ಸೇರ್ಪಡೆಯಾಗುತ್ತಾರೆ ಎಂದಾದರೆ ಆ ಕ್ಷಣದಿಂದಲೇ ಶಿಕ್ಷಣ, ಉದ್ಯೋಗ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿನ ಎಸ್ಟಿ ಮೀಸಲಾತಿಯನ್ನು ಶೇ. 14ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರದಿಂದ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
Advertisement