
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ಜಾಲಿವುಡ್ ಸ್ಟುಡಿಯೋಸ್ ಹಾಕಿದ್ದ ಬಿಗ್ ಬಾಸ್ ಮನೆಯ ನಿರ್ಮಾಣದಲ್ಲಿ ಸಂಪೂರ್ಣವಾಗಿ ನಿಯಮ ಉಲ್ಲಂಘಿಸಲಾಗಿದೆ ಎಂದು ಜಿಲ್ಲಾಡಳಿತ ಬೀಗಮುದ್ರೆ ಹಾಕಿದ್ದು, ಜಾಲಿವುಡ್ ಆಡಳಿತ ಮಂಡಳಿಗೆ ಬಿಕ್ ಶಾಕ್ ನೀಡಿದೆ.
ಇಂದು ಹೈಕೋರ್ಟ್ ಮೊರೆ
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಇಂದು ಜಾಲಿವುಡ್ ಸ್ಟುಡಿಯೋಸ್ ಹೈಕೋರ್ಟ್ ಮೊರೆ ಹೋಗಲಿದೆ ಎಂದು ತಿಳಿದುಬಂದಿದೆ. ಬಿಗ್ ಬಾಸ್ ನ ಮುಂದಿನ ದಿನಗಳು ಹೇಗೆ ಬೇರೆ ಕಡೆ ಶೋ ನಡೆಸುವುದೇ ಅಥವಾ ಸದ್ಯಕ್ಕೆ ಸ್ಥಗಿತಗೊಳಿಸುವುದೇ ಎಂದು ಚರ್ಚಿಸುತ್ತಿದೆ. ಇಂದೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಬಿಗ್ ಬಾಸ್ ನ ಎಲ್ಲಾ 17 ಮಂದಿ ಸ್ಪರ್ಧಿಗಳು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಇರುತ್ತಾರೆ ಎನ್ನಲಾಗಿದೆ. ಸ್ಪರ್ಧಿಗಳಿಗಾಗಿ 12 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
2024ರಿಂದ ಕಾನೂನು ಉಲ್ಲಂಘನೆ
ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ 2024ರಿಂದಲೇ ನಿಯಮ ಉಲ್ಲಂಘಿಸಿ ಬಿಗ್ ಬಾಸ್ ಮನೆಯ ಸೆಟ್ ಹಾಕಿ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಚಿತ್ರೀಕರಣ ಮಾಡುತ್ತಿತ್ತು. ಜಾಲಿವುಡ್ ಸ್ಟುಡಿಯೋಸ್ ಗೆ ಬೀಗಮುದ್ರೆ ಜೊತೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ 12ನೇ ಆವೃತ್ತಿಯ ಚಿತ್ರೀಕರಣ ಸ್ಥಗಿತಗೊಂಡಿದೆ. ಬಿಡದಿ ಬಳಿ ಜಾಲಿವುಡ್ ಸ್ಟುಡಿಯೊದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಬಿಗ್ ಬಾಸ್ ಸೆಟ್ ಸದ್ಯಕ್ಕೆ ಖಾಲಿಯೆನಿಸಿ ಭಣಗುಡುತ್ತಿದ್ದು ಬಿಗ್ ಬಾಸ್ 12ರ ಮುಂದಿನ ಕಥೆ ಏನು ಎಂಬ ಪ್ರಶ್ನೆ ಎದುರಾಗಿದೆ.
Advertisement