ಇತ್ತೀಚೆಗಷ್ಟೇ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಸ್ಥಗಿತವಾಗಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶೀಘ್ರದಲ್ಲೇ ಪುನಾರಂಭಗೊಳ್ಳಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದು, ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಮನೆಯನ್ನು ಸರ್ಕಾರದಿಂದ ಸೀಜ್ ಮಾಡಲಾಗಿತ್ತು. ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, 'ಜಾಲಿವುಡ್ ಸ್ಟುಡಿಯೋಸ್‌ಗೆ 'ಇದೊಂದು ಬಾರಿ ಅನುಮತಿ ನೀಡುವಂತೆ' ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉದ್ಯೋಗ ಮುಖ್ಯ, ಏನೇ ಇದ್ದರೂ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆ ಬಗೆಹರಿಸಿಕೊಳ್ಳಲಿ. ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ ಎಂದು ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಬಗ್ಗೆ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್‌ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಭಾಸ್ಕರ್ ರಾವ್ ಕ್ಷಮೆಯಾಚಿಸಿದ್ದಾರೆ. ಕಾನೂನಾತ್ಮಕವಾಗಿ ತುಂಬಾ ತಪ್ಪಾಗಿದ್ದರೂ ಸಹ, ಪರಿಣಾಮಗಳನ್ನು ಲೆಕ್ಕಿಸದೆ ನಿಮ್ಮ ವಯಸ್ಸಿನಲ್ಲಿ, ನಿಲುವು ತೆಗೆದುಕೊಂಡು ಅದಕ್ಕೆ ಬದ್ಧತೆಯಿಂದ ಬದುಕುವ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ" ಎಂದು ಭಾಸ್ಕರ್ ರಾವ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. "ಮನುಸ್ಮೃತಿ ಮತ್ತು ಸನಾತನ ಧರ್ಮದ ಹೆಸರಿನಲ್ಲಿ ಇದು ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅವಮಾನ ಮಾಡಿರುವ ಮೊದಲ ಪ್ರಕರಣ ಇದಾಗಿದ್ದು, ಇದನ್ನು ಸಹಿಸಲಾಗುವುದಿಲ್ಲ" ಎಂದು ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಸ್ಥಳೀಯ ಬಿಜೆಪಿ ಯುವ ಮೋರ್ಚಾ ನಾಯಕ ವೆಂಕಟೇಶ್ ಕುರುಬರ ಅವರನ್ನು ಕೊಲೆ ಮಾಡಲಾಗಿದೆ. 2003 ರಲ್ಲಿ ನಡೆದ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದ ಕಾರಣಕ್ಕಾಗಿ 31 ವರ್ಷದ ಯುವ ಮೋರ್ಚಾ ಅಧ್ಯಕ್ಷರ ಹತ್ಯೆ ಮಾಡಲಾಗಿದೆ ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಹೇಳಿದ್ದಾರೆ. ವೆಂಕಟೇಶ್ ಕುರುಬ ದೇವಿ ಕ್ಯಾಂಪ್‌ನಿಂದ ಗಂಗಾವತಿಗೆ ಬರುತ್ತಿದ್ದಾಗ ಜನರ ಗುಂಪೊಂದು ಅವರ ಮೇಲೆ ಮಚ್ಚುಗಳಿಂದ ದಾಳಿ ಮಾಡಿ ಕೊಚ್ಚಿ ಕೊಂದಿದೆ. ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂದೆ ಈ ಘಟನೆ ಸಂಭವಿಸಿದೆ. ವೆಂಕಟೇಶ್ ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್ ಸದಸ್ಯರು ಬೈಕಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸಾಕಿದ ಹಸುವನ್ನು ಹುಲಿ ತಿಂದಿದೆ ಎನ್ನುವ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿಗಳ ಪದಕ ವಿತರಿಸಿ ಮಾತನಾಡಿದ ಸಿಎಂ, ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದು ಸಿಎಂ ಹೇಳಿದ್ದಾರೆ.
Advertisement