
ಸಂಗೀತ ಸಾಮ್ರಾಜ್ಞಿ ದಿವಂಗತ ಗಂಗೂಬಾಯಿ ಹಾನಗಲ್ ಅವರ ನಿವಾಸ ಶಿಥಿಲಗೊಂಡಿದ್ದು ಸರ್ಕಾರ ಕೂಡಲೇ ಗಮನ ಹರಿಸಬೇಕೆಂಬ ಕೂಗು ಬಹಳ ವರ್ಷಗಳ ಹಿಂದಿನಿಂದಲೂ ಕೇಳಿಬರುತ್ತಿದೆ. ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಧಾರವಾಡದ, ಹೊಸ ಯಲ್ಲಾಪುರ ರಸ್ತೆಯಲ್ಲಿರುವ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ, ಸಂಗೀತ ಶಿರೋಮಣಿ, ಸಂಗೀತ ಕಲಾರತ್ನ, ಪದ್ಮವಿಭೂಷಣ ಪುರಸ್ಕೃತ ಡಾ.ಗಂಗೂಬಾಯಿ ಹಾನಗಲ್ ಅವರ ನಿವಾಸ ಶಿಥಿಲಗೊಂಡಿದೆ.
ಈ ಹಿಂದೆ ಸರ್ಕಾರ ಅವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡಲು ಹಣ ಬಿಡುಗಡೆ ಮಾಡಿದರೂ ಸಹ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ, ಸರ್ಕಾರಗಳ ನಿರ್ಲಕ್ಷ್ಯದಿಂದ ಈ ಮಟ್ಟಕ್ಕೆ ತಲುಪಿರುವುದು ಶೋಚನೀಯ ಸಂಗತಿ ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.
ಸ್ಮಾರಕ ಕಟ್ಟಡವು ಹತ್ತೇ ವರ್ಷದಲ್ಲಿ ಪಾಳು ಬಿದ್ದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ, ಕನ್ನಡ & ಸಂಸ್ಕೃತಿ ಇಲಾಖೆಯ ಅಸಡ್ಡೆಗೆ ಹಿಡಿದ ಕೈಗನ್ನಡಿ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗವ್ವರವರ ನಿವಾಸವನ್ನು ಸಂಪೂರ್ಣವಾಗಿ ನವೀಕರಿಸಿ ಅವರಿಗೆ ಗೌರವ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
Advertisement