ಆನ್‌ಲೈನ್ ಬೆಟ್ಟಿಂಗ್ ಹಗರಣದಲ್ಲಿ ED ಯಿಂದ ಶಾಸಕ ವೀರೇಂದ್ರ ಪಪ್ಪಿ ತನಿಖೆ: ಲಾಕರ್ ನಲ್ಲಿ ಪತ್ತೆಯಾಗಿದ್ದು 40 ಕೆ.ಜಿ ಚಿನ್ನ!

ಚಳ್ಳಕೆರೆಯ ಎರಡು ಲಾಕರ್‌ಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
MLA Veerendra Puppi
ಶಾಸಕ ವೀರೇಂದ್ರ ಪಪ್ಪಿ
Updated on

ಬೆಂಗಳೂರು: ಅಕ್ರಮ ಬೆಟ್ಟಿಂಗ್‌ ದಂಧೆ ಪ್ರಕರಣದಲ್ಲಿ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಯವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಶಾಸಕರಿಗೆ ಸೇರಿದ ಚಳ್ಳಕೆರೆಯಲ್ಲಿನ ಮನೆ ಹಾಗೂ ಬ್ಯಾಂಕ್‌ ಲಾಕರ್‌ಗಳಿಂದ , 50.33 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಚಳ್ಳಕೆರೆಯ ಎರಡು ಲಾಕರ್‌ಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು, ಇಡಿ ಸುಮಾರು 21 ಕೆಜಿ ಚಿನ್ನದ ಗಟ್ಟಿಗಳು, ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಬ್ಯಾಂಕ್ ಖಾತೆಗಳು ಮತ್ತು ದುಬಾರಿ ವಾಹನಗಳ ರೂಪದಲ್ಲಿ 103 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಸದ್ಯ ಅಕ್ರಮ ಆನ್‌ಲೈನ್‌ ಗೇಮ್‌ ಪ್ರಕರಣಕ್ಕೆ ಸಂಬಂಧಿಸಿ ವೀರೇಂದ್ರ ಪಪ್ಪಿಯವರ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಅವರ ಮಾಹಿತಿಯನ್ನೇ ಆಧರಿಸಿ ನಿನ್ನೆ ಅವರ ನಿವಾಸ ಹಾಗೂ ಫೆಡರಲ್‌ ಬ್ಯಾಂಕ್‌ನ ಎರಡು ಲಾಕರ್‌ಗಳಲ್ಲಿ ಪರಿಶೀಲನೆ ಮಾಡಿದರು. ಈ ವೇಳೆ 40 ಕೆ.ಜಿ. ತೂಕದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈವರೆಗೆ ಶಾಸಕ ವೀರೇಂದ್ರ ಅವರಿಂದ ಜಪ್ತಿ ಮಾಡಿರುವ ನಗ ನಾಣ್ಯದ ಮೊತ್ತವು 150 ಕೋಟಿ.ರೂ.ಎಂದು ತಿಳಿಸಿದ್ದಾರೆ.

ಇದುವರೆಗಿನ ತನಿಖೆ ಏನು ಹೇಳುತ್ತದೆ?

ತನಿಖೆಯಲ್ಲಿ ವೀರೇಂದ್ರ ಪಪ್ಪಿ ಇತರ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಅನೇಕ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳಾದ ಕಿಂಗ್ 567, ರಾಜ 567 ಇತ್ಯಾದಿಗಳ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು ಮತ್ತು ಅದರ ಮೂಲಕ ಮುಗ್ಧ ಆಟಗಾರರನ್ನು ವಂಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಟಗಾರರಿಂದ ಹಣ ಸಂಗ್ರಹವನ್ನು ಫೋನ್‌ಪೈಸಾ ಮುಂತಾದ ಹಲವಾರು ಗೇಟ್‌ವೇಗಳನ್ನು ಬಳಸಿ ಮಾಡಲಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ಭಾರತದಾದ್ಯಂತದ ಮಧ್ಯವರ್ತಿಗಳಿಂದ ಬೆಟ್ಟಿಂಗ್ ನಿರ್ವಾಹಕರು ಹಲವಾರು ಮ್ಯೂಲ್ ಖಾತೆಗಳ ಮೂಲಕ ಪಡೆದಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಶಾಸಕ ವೀರೇಂದ್ರ ಪಪ್ಪಿ ಅವರು, ಸುಮಾರು 2 ಸಾವಿರ ಕೋಟಿ ರೂ. ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.

MLA Veerendra Puppi
ಅಕ್ರಮ ಬೆಟ್ಟಿಂಗ್ ಪ್ರಕರಣ: ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್; 21 ಕೆಜಿ ಗೋಲ್ಡ್ ಬಿಸ್ಕೇಟ್ ಜಪ್ತಿ

ವಿದೇಶಿ ಬ್ಯಾಂಕ್ ಗಳಿಗೆ ವರ್ಗಾವಣೆ

ಅಕ್ರಮ ಬೆಟ್ಟಿಂಗ್‌ನಿಂದ ಬಂದಂತಹ ಹಣವನ್ನು ವಿದೇಶಿ ಬ್ಯಾಂಕ್‌ಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಶಾಸಕರ ಜೊತೆಗೆ ಅವರ ಸಹೋದರರಾದ ಕೆ.ಸಿ.ತಿಪ್ಪೇಸ್ವಾಮಿ ಮತ್ತು ಪೃಥ್ವಿರಾಜ್ ದುಬೈನಲ್ಲಿ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್‌ ಟೆಕ್ನಾಲಜೀಸ್‌, ಪ್ರೈಮ್ 9 ಟೆಕ್ನಾಲಜೀಸ್‌ ಎಂಬ ಹೆಸರಿನಲ್ಲಿ ಕಾಲ್‌ಸೆಂಟರ್‌ಗಳನ್ನು ತೆರೆದು ಆನ್‌ಲೈನ್ ಗೇಮಿಂಗ್ ವ್ಯವಹಾರ ನಡೆಸುತ್ತಿದ್ದರು ಎಂಬುದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

103 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

ವೀರೇಂದ್ರ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಹಿಂದೆ ವೀರೇಂದ್ರ ಮತ್ತು ಅವರ ಕುಟುಂಬದವರಿಂದ 21 ಕೆ.ಜಿ. ಚಿನ್ನದ ಗಟ್ಟಿಗಳು, ನಗದು, ಚಿನ್ನಾಭರಣ, ಬೆಳ್ಳಿ ಆಭರಣಗಳು, ಐಷಾರಾಮಿ ಕಾರುಗಳು ಸೇರಿದಂತೆ ಸುಮಾರು 103 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿತ್ತು. ಆರೋಪಿ ವೀರೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವನು ಕಾನೂನುಬಾಹಿರವಾಗಿ ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವುದು ಬಯಲಾಗಿದೆ.

ವೀರೇಂದ್ರ, ಅವರ ಕುಟುಂಬ ಸದಸ್ಯರು ಮತ್ತು ಸಹಚರರು ಕೋಟ್ಯಂತರ ರೂಪಾಯಿ ಮೌಲ್ಯದ ಅಂತಾರಾಷ್ಟ್ರೀಯ ಪ್ರಯಾಣ ಟಿಕೆಟ್‌ಗಳು, ವೀಸಾ ಮತ್ತು ಇತರ ಆತಿಥ್ಯ ಸೇವೆಗಳನ್ನು ಬುಕ್ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ. ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳಿಂದ ಬಂದ ಆದಾಯಕ್ಕೆ ಲಿಂಕ್ ಮಾಡಲಾದ ಮ್ಯೂಲ್ ಖಾತೆಗಳ ಜಾಲದ ಮೂಲಕ ಹಣಕಾಸು ಒದಗಿಸಲಾಗಿದೆ.

ಈ ಮ್ಯೂಲ್ ಖಾತೆಗಳ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮಾರ್ಕೆಟಿಂಗ್, ಬಲ್ಕ್ ಎಸ್‌ಎಂಎಸ್ ಸೇವೆಗಳು, ಪ್ಲಾಟ್‌ಫಾರ್ಮ್ ಹೋಸ್ಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ ಮುಂತಾದ ವೆಚ್ಚಗಳನ್ನು ವೀರೇಂದ್ರ ಮತ್ತು ಅವರ ಸಹಚರರು ನಿಯಂತ್ರಿಸುವ ಈ ಖಾತೆಗಳ ಮೂಲಕ ಪಾವತಿಸಲಾಗುತ್ತದೆ.

ಈ ವಹಿವಾಟುಗಳಿಗೆ ಬಳಸಲಾದ ಹಣವನ್ನು ಅಕ್ರಮ ಆನ್‌ಲೈನ್ ಚಟುವಟಿಕೆಗಳಿಂದ ಬೇರೆಡೆ ಬಳಸಲಾಗಿದೆ. ಅವುಗಳ ಮೂಲವನ್ನು ಮರೆಮಾಚಲು ಬಹು ಮಧ್ಯವರ್ತಿ ಖಾತೆಗಳ ಮೂಲಕ ರವಾನಿಸಲಾಗಿದೆ ಎಂದು ಪುರಾವೆಗಳು ಸೂಚಿಸುತ್ತವೆ ಎಂದು ED ಹೇಳಿದೆ.

ಬಂಧಿಸಿದ್ದು ಎಲ್ಲಿ?

ವೀರೇಂದ್ರ ಪಪ್ಪಿ ಅವರನ್ನು ಕೊಲ್ಕತ್ತಾ ಇಡಿ ಅಧಿಕಾರಿಗಳ ಸಹಯೋಗದಿಂದ ಸಿಕ್ಕಿಂನ ಗ್ಯಾಂಗ್ಟಕ್‌ನಿಂದ ಬಂಧಿಸಿ ಕರೆತರಲಾಗಿತ್ತು. ನಂತರ ಬೆಂಗಳೂರಿನ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿ, 35 ನೇ ಸಿಸಿಹೆಚ್ ಕೋರ್ಟ್ ಜಡ್ಜ್‌, 5 ದಿನಗಳ ಕಾಲ ಇಡಿ ಕಸ್ಟಡಿಗೆ ಕೊಟ್ಟಿತ್ತು. ಆಗಸ್ಟ್‌ 28 ರಂದು ವೀರೇಂದ್ರ ಪಪ್ಪಿ ಪರವಕೀರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com