ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಬಲೂನ್ ಮಾರಲು ಬಂಧಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗುರುವಾರ ಬೆಳಿಗ್ಗೆ ಬಾಲಕಿಯೊಬ್ಬಳ ಮೃತದೇಹ ವಸ್ತುಪ್ರದರ್ಶನ ಮೈದಾನದಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಮೈಸೂರಿನ ಸಿದ್ಧಲಿಂಗಪುರದ ಕಾರ್ತಿಕ್ ಎಂಬಾತನ ಮೇಲೆ ಅನುಮಾನ ಬಂದಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌ಸಿ ಮಹದೇವಪ್ಪ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಾಲಕಿ ಅತ್ಯಾಚಾರ ಕೊಲೆ ಅತ್ಯಂತ ಹೀನ ಕೃತ್ಯವಾಗಿದೆ. ಆದರೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಈಮಧ್ಯೆ, ರೌಡಿ ಶೀಟರ್ ಗಿಲ್ಕಿ ವೆಂಕಟೇಶ್ ಕೊಲೆ, ಬಾಲಕಿಯ ಅತ್ಯಾಚಾರ ಕೊಲೆ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ನಾಳೆ ಹಿರಿಯ ಅಧಿಕಾರಿಗಳ ಜೊತೆ ಮೈಸೂರಲ್ಲಿ ಸಭೆ ನಡೆಸಲಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಕುರಿತ ಊಹಾಪೋಹಗಳ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಅವರನ್ನು ನಿನ್ನೆ ಗೃಹ ಸಚಿವ ಜಿ ಪರಮೇಶ್ವರ ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಕಾಂಗ್ರೆಸ್ ನಾಯಕರೊಂದಿಗಿನ ತಮ್ಮ ನಿನ್ನೆಯ ಭೇಟಿ ರಾಜಕೀಯವಲ್ಲ, ಬದಲಿಗೆ 'ಸಾಮಾನ್ಯ' ಸಭೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಸಹೋದ್ಯೋಗಿಗಳನ್ನು ಅಕ್ಟೋಬರ್ 13ರಂದು ಔತಣ ಕೂಟಕ್ಕೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯ ನಂತರ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡುವ ನಿರೀಕ್ಷೆಯಲ್ಲಿದ್ದು ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈಮಧ್ಯೆ, ರಾಜ್ಯದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಅನೇಕ ರಾಜಕೀಯ ಬೆಳವಣಿಗೆಗಳು ನವೆಂಬರ್ ತಿಂಗಳಲ್ಲಿ ತಾರ್ಕಿಕ ಅಂತ್ಯವನ್ನು ತಲುಪುತ್ತವೆ. ಆಡಳಿತ ಪಕ್ಷದಲ್ಲಿರುವವರೇ ಇದರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತನಗೆ ಜೈಲಿನಲ್ಲಿ ಯಾವುದೇ ಸವಲತ್ತು ನೀಡಿಲ್ಲ. ಕೋರ್ಟ್ ಆದೇಶ ನೀಡಿದ್ದರೂ ಜೈಲಧಿಕಾರಿಗಳು ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ. ನಟ ದರ್ಶನ್ ಈ ಹಿಂದೆ ಜೈಲಿನಲ್ಲಿ ತನಗೆ ಹಾಸಿಗೆ, ತಲೆ ದಿಂಬು ಸೇರಿದಂತೆ ಕೆಲ ಸೌಲಭ್ಯ ನೀಡುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕೂಡ ದರ್ಶನ್ ಗೆ ಕೆಲ ಸವಲತ್ತು ನೀಡುವಂತೆ ಜೈಲಧಿಕಾರಿಗಳಿಗೆ ಸೂಚಿಸಿದ್ದರೂ ದರ್ಶನ್ ಗೆ ಯಾವುದೇ ಸವಲತ್ತನ್ನು ನೀಡಿರಲಿಲ್ಲ. ಹೀಗಾಗಿ ದರ್ಶನ್ ಪರ ವಕೀಲರು ಮತ್ತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಖುದ್ದು ಜೈಲಿಗೆ ತೆರಳಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ ಅಕ್ಟೋಬರ್ 18ರೊಳಗೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗೆ ಕೋರ್ಟ್ ಆದೇಶಿಸಿದೆ.
SDPI ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಇಂದು ಮಂಗಳೂರು ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಮೂರ್ನಾಲ್ಕು ತಿಂಗಳಿನಿಂದ ವಿಚಾರಣೆಗೆ ಹಾಜರಾಗದೆ ಭರತ್ ಕುಮ್ಡೇಲು ತಲೆ ಮರೆಸಿಕೊಂಡಿದ್ದನು. ಹೀಗಾಗಿ ಕೋರ್ಟ್ಗೆ ಹಾಜರಾಗದ ಕಾರಣ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು. ಭರತ್ ಕುಮ್ಡೇಲು ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು. ಮತ್ತೊಂದೆಡೆ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ಉಲ್ಲಂಘನೆ ಆರೋಪದಲ್ಲಿ SDPI ಮುಖಂಡ ರಿಯಾಜ್ ಕಡಂಬುನನ್ನು ಜಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Advertisement