
ಹಾಸನ: ಹಾಸನದಲ್ಲಿ ನಡೆಯುತ್ತಿರುವ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಾರಾಂತ್ಯದ ಹಿನ್ನೆಯಲ್ಲಿ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರೆ, ನಿಗದಿತ ಅವಧಿಯಲ್ಲಿ ಗಣ್ಯರು ಕೂಡ ಆಗಮಿಸಿ ದೇವರ ಪಡೆದರು. ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಖುದ್ದು ದೇವಾಲದಲ್ಲೇ ಹಾಜರಿದ್ದು ಭಕ್ತರ ಕುಂದುಕೊರತೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.
ಶುಕ್ರವಾರದಿಂದ ಆರಂಭವಾದ ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರ ಅಪಾರ ದರ್ಶನದಿಂದ ಕೇವಲ ಎರಡೇ ದಿನಗಳಲ್ಲಿ 2.24 ಕೋಟಿರೂ. ಆದಾಯ ದಾಖಲಿಸಿದೆ. ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ₹300 ವಿಶೇಷ ದರ್ಶನದಲ್ಲಿ ಒಟ್ಟು 27,759 ಟಿಕೆಟ್‌ಗಳು ಮಾರಾಟವಾಗಿವೆ. ಅದೇ ರೀತಿ ₹1000 ವಿಶೇಷ ದರ್ಶನದಲ್ಲಿ ಒಟ್ಟು 12,396 ಮಾರಾಟವಾಗಿವೆ.
ಇದೇ ವೇಳೆ ಲಾಡು ಪ್ರಸಾದ ಮಾರಾಟದ ಸಂಖ್ಯೆ 17,337 ಆಗಿದ್ದು, ಮೂರು ದಿನಗಳಲ್ಲಿ ಭಾರಿ ಆದಾಯ ಲಭಿಸಿದೆ. 300ರೂ. ವಿಶೇಷ ದರ್ಶನ ಟಿಕೆಟ್‌ಗಳಿಂದ ಒಟ್ಟು 83,27,700 ರೂ ಹಾಗೂ 1000 ರೂ. ವಿಶೇಷ ದರ್ಶನ ಟಿಕೆಟ್‌ಗಳಿಂದ 1,23,96,000 ರೂ. ಲಾಡು ಪ್ರಸಾದ ಮಾರಾಟದಿಂದ 17,33,700 ರೂ. ಸೇರಿ ಒಟ್ಟು ಆದಾಯ: ₹2 ಕೋಟಿ 24 ಲಕ್ಷ 57 ಸಾವಿರ 400 ರೂ. ಸಂಗ್ರಹವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಆರು ಸಿಬ್ಬಂದಿ ಅಮಾನತು: ಈ ಮಧ್ಯೆ ಹಾಸನಾಂಬೆ ದರ್ಶನದ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಸಮಾಜ ಕಲ್ಯಾಣ ಹಾಗೂ ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿ ಅಮಾನತು ಮಾಡಲಾಗಿದೆ. ಗುರುತಿನ ಚೀಟಿ ದುರುಪಯೋಗದ ಆರೋಪದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಗಳಾದ ರಮೇಶ್ ಮತ್ತು ಆನಂದ್ ಎಂಬ ಇಬ್ಬರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಕೆಎಸ್ ಲತಾ ಅಮಾನತುಗೊಳಿಸಿದ್ದಾರೆ.
ಇದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದೆ. ಸರ್ಕಾರದ ಗುರುತಿನ ಚೀಟಿಯನ್ನು ಬೇರೆಯವರಿಗೆ ನೀಡುವುದು ಗಂಭೀರ ಅಪರಾಧವಾಗಿದೆ. ಅವರ ಐಡಿ ಕಾರ್ಡ್ ನಲ್ಲಿ ಬೇರೆಯವರು ದೇವಾಲಯ ಪ್ರವೇಶಿಸಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅಲ್ಲದೇ ಗೋಲ್ಡ್ ಕಾರ್ಡ್ ಕೌಂಟರ್ ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ಒಳಗಡೆ ಬಿಡಲಾಗಿದೆ ಎಂದು ಆರೋಪದ ಮೇಲೆ ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರ್ ಐಗಳಾದ ಗೋವಿಂದ ರಾಜ್, ಯೋಗಾನಂದ್ ಮತ್ತು ಲೆಕ್ಕಾಧಿಕಾರಿಗಳಾದ ಸಂತೋಷ್ ಅಂಬಿಗರ, ಶಿರಾಜ್ ಮಹಿಮಾ ಪಟೇಲ್ ಅವರನ್ನು ತಕ್ಷಣದಿಂದ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಆದೇಶಿಸಿದ್ದಾರೆ. ಅಕ್ಟೋಬರ್ 23 ರಂದು ದೇವಿಯ ದರ್ಶನ ಮುಕ್ತಾಯವಾಗಲಿದೆ.
Advertisement