
ಬೆಂಗಳೂರು: ಯಾವುದೇ ವರ್ಗಾವಣೆ ಆಗ ಬೇಕಾದರೆ ಸಿಎಂ ಪುತ್ರನಿಗೆ ತೆರಿಗೆ ಕಟ್ಟ ಬೇಕು ಎಂದು ಆರೋಪಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕೆ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನ್ನು ಸಾಮಾಜಿಕ ಜಾಲತಾಣದಲ್ಲಿ ಜನರೇ ತರಾಟೆಗೆ ತೆಗೆದುಕೊಂಡಿದ್ದಾರೆ.
"ಮೈಸೂರಿನ ಮಾಜಿ ಸಂಸದ ಮಿಸ್ಟರ್ ಅವಿವೇಕಿ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದರು, ನೀವು ಸಿದ್ದರಾಮಯ್ಯ ಕಾಲಿನ ಧೂಳಿಗೂ ಸಮವಲ್ಲ, ಸಿಎಂ ಪುತ್ರ ಯತೀಂದ್ರ ಟ್ಯಾಕ್ಸ್ ಬಗ್ಗೆ ಮಾತನಾಡುವುದಕ್ಕೂ ಮೊದಲು ಆರ್ ಅಶೋಕ್ ಟ್ಯಾಕ್ಸ್, ವಿಜಯಪುರದಲ್ಲಿ ಯತ್ನಾಳ್ ಟ್ಯಾಕ್ಸ್ ಬಗ್ಗೆಯೂ ಪ್ರತಾಪ್ ಸಿಂಹ ಮಾತನಾಡಲಿ" ಎಂದು ಮಾಧ್ಯಮಗಳಿಗೆ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಮಾಧ್ಯವೊಂದರ ಸಾಮಾಜಿಕ ಜಾಲತಾಣ ಪೇಜ್ ನಲ್ಲಿ ಜನರು ಪ್ರದೀಪ್ ಈಶ್ವರ್ ಅವರನ್ನು ಕಾಮೆಂಟ್ ವಿಭಾಗದಲ್ಲಿ ತರಾಟೆಗೆ ತೆಗೆದುಕೊಂಡಿದ್ದು, ಹಿಗ್ಗಾ-ಮುಗ್ಗಾ ಝಾಡಿಸಿದ್ದಾರೆ.
ಮಾತಿನ ಮೇಲೆ ಹಿಡಿತವಿಲ್ಲದ ಈ ಶಾಸಕನ ಮಾತು ಕೇಳಿ ಪಾಠ ಕಲಿಯುವ ವಿದ್ಯಾರ್ಥಿಗಳಿಗೆ ಕತೆಯನ್ನು ದೇವರೇ ಕಾಪಾಡಬೇಕು ಎಂದು ವ್ಯಕ್ತಿಯೋರ್ವರು ಕಾಮೆಂಟ್ ಮಾಡಿದ್ದಾರೆ. ಸಾವಿರಾರು ಕಾಮೆಂಟ್ ಗಳು ಪ್ರದೀಪ್ ಈಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಮೊದಲು ರಸ್ತೆ ದುರಸ್ತಿ ಮಾಡಿಸಿ ಆ ನಂತರ ಟ್ಯಾಕ್ಸ್ ಬಗ್ಗೆ ಮಾತನಾಡಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಜನರ ಕಾಮೆಂಟ್ ಗಳನ್ನು ಗಮನಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಕಾಮೆಂಟ್ ಗಳ ಸ್ಕ್ರೀನ್ ಶಾಟ್ ನ್ನು ಹಂಚಿಕೊಂಡಿದ್ದು, ವರದಿಯ ಕೆಳಗಿರುವ ಕಾಮೆಂಟ್ ಗಳನ್ನು ನೋಡಿದರೆ ಇವನು ಮೆಂಟಲ್ ಆಗುವುದು ಗ್ಯಾರಂಟಿ! ಎಂದು ಪ್ರದೀಪ್ ಈಶ್ವರ್ ಗೆ ಟಾಂಗ್ ಕೊಟ್ಟಿದ್ದಾರೆ.
Advertisement