
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗಳನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಕಳೆದ ಶನಿವಾರ ಸ್ವೀಕರಿಸಿದ ಇಮೇಲ್‌ನಲ್ಲಿ ಸಿಎಂ ಮತ್ತು ಡಿಸಿಎಂ ಮನೆಗಳಲ್ಲಿ ನಾಲ್ಕು ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್ ಇರಿಸಲಾಗಿದೆ ಎಂದು ತಿಳಿಸಲಾಗಿದೆ.
ಬಾಂಬ್ ನಿಷ್ಕ್ರಿಯ ತಂಡ, ಕೂಲಂಕಷವಾಗಿ ಪರಿಶೀಲಿಸಿದ ನಂತರ, ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಸಲಾಗಿದೆ.
ಪೊಲೀಸರ ಪ್ರಕಾರ, ಶನಿವಾರ ಬೆಳಗಿನ ಜಾವ 4:20 ರ ಸುಮಾರಿಗೆ, ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ(cm.kar@nic.in) ಮತ್ತು ಡಿಸಿಎಂ ಅವರ ವೈಯಕ್ತಿಕ ಇಮೇಲ್ ಐಡಿ dkshivakumar1@gmail.com ಗೆ ಇಮೇಲ್ ಕಳುಹಿಸಿದ್ದಾರೆ.
"ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಮನೆಗಳಲ್ಲಿ ಆರ್‌ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದ್ದು, ಅವುಗಳನ್ನು ದೂರದಿಂದಲೇ ಸ್ಫೋಟಿಸಲಾಗುತ್ತದೆ" ಎಂದು ಇಮೇಲ್ ನಲ್ಲಿ ಬರೆದಿದ್ದಾರೆ.
ಇದರ ನಂತರ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳನ್ನು ಸಂಪೂರ್ಣ ಶೋಧ ನಡೆಸಿತು ಮತ್ತು ನಂತರ ಅದು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಿತು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ಯ ಸೆಕ್ಷನ್ 351(4) (ಕ್ರಿಮಿನಲ್ ಬೆದರಿಕೆ) ಮತ್ತು 353(1)(ಬಿ) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಅಡಿಯಲ್ಲಿ ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಕಳುಹಿಸಲಾದ ಇಮೇಲ್ ತಮಿಳುನಾಡಿನಿಂದ ಬಂದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement