
ಬೆನ್ನು ನೋವು ಕಾರಣ ನೀಡಿ ಆಪರೇಷನ್ ಮಾಡಿಸಿಕೊಳ್ಳಲು ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದಿದ್ದ ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ನ ಒತ್ತಡದಲ್ಲಿಯೇ ಕಳೆದುಹೋದರು. ಸಿನಿಮಾ ಶೂಟ್ನಲ್ಲಿ ಬ್ಯುಸಿ ಆದ ಅವರು ಸರ್ಜರಿ ಮಾಡಿಸಿಕೊಳ್ಳಲೇ ಇಲ್ಲ. ಆರು ತಿಂಗಳು ಹೊರಗಿದ್ದ ದರ್ಶನ್ ಮತ್ತೆ ಜೈಲುಪಾಲಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ಇತ್ತೀಚೆಗೆ ಮಲಗಲು ಹಾಸಿಗೆ, ತಲೆದಿಂಬು ಬೇಕೆಂದು ಮನವಿ ಮಾಡಿಕೊಂಡಿದ್ದ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ. ಜೈಲಾಧಿಕಾರಿಗಳಿಗೆ ಪತ್ರ ಬರೆದು ಚಿಕಿತ್ಸೆಗೆ ಮನವಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದೊಂದು ವಾರದಿಂದ ದರ್ಶನ್ ಗೆ ಬೆನ್ನುನೋವು ಹೆಚ್ಚಾಗಿದ್ದು, ಕುಂಟುತ್ತಲೇ ನಡೆಯುತ್ತಿದ್ದಾರೆ. ಹೀಗಾಗಿ, ಚಿಕಿತ್ಸೆ ಕೊಡಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ.
ಅವರ ಮನವಿ ಮೇರೆಗೆ ಸಿವಿ ರಾಮನ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಜೈಲಾಧಿಕಾರಿಗಳು ಪತ್ರ ಬರೆದಿದ್ದರು. ತಪಾಸಣೆ ವೇಳೆ ಫಿಜಿಯೋಥೆರಫಿ ಅವಶ್ಯಕತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ಫಿಸಿಯೋ ಥೆರಪಿ ಮಾಡಲು ವೈದ್ಯರು ಮುಂದಾಗಿದ್ದಾರೆ.
ದರ್ಶನ್ ಅವರಿಗೆ ಕೆಲವು ವರ್ಷಗಳ ಹಿಂದೆ ಮೈಸೂರು ಬಳಿ ಕಾರು ಅಪಘಾತದಲ್ಲಿ ಕೈ ಫ್ರಾಕ್ಚರ್ ಆಗಿ ಸರ್ಜರಿ ಮಾಡಿ ಕೈಯೊಳಗೆ ರಾಡ್ ಹಾಕಿದ್ದರು. ಇದೀಗ ಅದರ ನೋವು ಕೂಡ ಕಾಣಿಸಿಕೊಂಡಿದ್ದು ಬೆರಳುಗಳು ಮರಗಟ್ಟುತ್ತಿವೆ.
ದರ್ಶನ್ ಗೆ ಇನ್ನೂ ಜೈಲಿನಲ್ಲಿ ಮಲಗಲು ಹಾಸಿಗೆ-ದಿಂಬು ಸೌಲಭ್ಯ ನೀಡಿಲ್ಲ. ಈಗ ಅವರು ನೆಲದ ಮೇಲೆ ಮಲಗುತ್ತಿರುವುದರಿಂದ ಶೀತಕ್ಕೆ ಬೆನ್ನು ನೋವು ಮತ್ತೆ ಹೆಚ್ಚಾಗಿರಬಹುದು. ಹೀಗಾಗಿ ಮೊಣಕೈ ನೋವಿಗೂ ಅವರಿಗೆ ಚಿಕಿತ್ಸೆ ನೀಡಬೇಕಾಗಿದೆ.
ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ
ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ. ವರದರಾಜು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿನ್ನೆ ಮಧ್ಯಾಹ್ನ 12 ಗಂಟೆಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಅವರು ನಟ ದರ್ಶನ್ ಅವರ ಸೆಲ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಕಾರಾಗೃಹ ನಿಯಾಮಾವಳಿ ಅನುಸಾರ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ದರ್ಶನ್ ಅವರಿಂದ ಕೂಡ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Advertisement