
ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿರುವ ಉದ್ಯಮಿಗಳ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ತಮ್ಮ ಬೆಳವಣಿಗೆಗೆ ನೆರವಾದ ನಗರ ಮತ್ತು ರಾಜ್ಯಕ್ಕೆ "ಧಕ್ಕೆ" ತರುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಡಿಕೆ ಶಿವಕುಮಾರ್ ಅವರು, ಅವರು ತಮ್ಮ "ಬೇರುಗಳನ್ನು" - ಬೆಂಗಳೂರು, ಕರ್ನಾಟಕ ಮತ್ತು ಅದರ ಜನರನ್ನು ಮರೆಯಬಾರದು ಎಂದು ಉದ್ಯಮಿಗಳಿಗೆ ಮನವಿ ಮಾಡಿದರು ಮತ್ತು "ಎಲ್ಲದಕ್ಕೂ ಒಂದು ಮಿತಿ ಇದೆ" ಎಂದು ಕಿಡಿ ಕಾರಿದರು.
ನಗರದ ಕಳಪೆ ರಸ್ತೆಗಳು ಮತ್ತು ಸಂಚಾರ ದಟ್ಟಣೆಯ ಬಗ್ಗೆ ರಾಜ್ಯ ಸರ್ಕಾರ ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದು, ನಿನ್ನೆಯಷ್ಟೇ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಷಾ ಅವರು ಬೆಂಗಳೂರಿನ ಮೂಲಸೌಕರ್ಯದ ಕುರಿತು ವಿದೇಶಿ ಉದ್ಯಮಿಯೊಬ್ಬರ ಕಟುವಾದ ಹೇಳಿಕೆಗಳನ್ನು 'ಎಕ್ಸ್' ನಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.
ಕಿರಣ್ ಮಜುಂದಾರ್-ಷಾ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ಇಂತಹ ಪೋಸ್ಟ್‌ಗಳನ್ನು ಮಾಡುವುದು ತಮ್ಮನ್ನು ತಾವು ಕೊಂದುಕೊಂಡಂತೆ. ಅವರು ತಮ್ಮ ಸ್ವಂತ ದೇಶ ಮತ್ತು ಅವರಿಗೆ ಸಹಾಯ ಮಾಡಿದ ನಗರ ಹಾಗೂ ರಾಜ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಅವರು 25 ವರ್ಷಗಳ ಹಿಂದೆ ಎಲ್ಲಿದ್ದರು? ಅವರಿಗೆ ಎಲ್ಲವನ್ನೂ ನೀಡಿದ್ದು ಈ ಬೆಂಗಳೂರು. ಬೆಂಗಳೂರು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ, ಉದ್ಯಮಿಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದೆ. ಟೀಕಿಸುವವರಿಗೆ ಸರ್ಕಾರಗಳು ಎಷ್ಟು ಜಾಗ ಕೊಟ್ಟಿದೆ, ಎಷ್ಟು ನೆರವು ನೀಡಿದೆ ಎಂಬುದನ್ನು ಸ್ಮರಿಸಬೇಕು” ಎಂದು ತಿರುಗೇಟು ನೀಡಿದರು.
ನಗರದ ಮೂಲಸೌಕರ್ಯ ಸವಾಲುಗಳನ್ನು ಪರಿಹರಿಸಲು ಸರ್ಕಾರ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಐಟಿ ಕಾರಿಡಾರ್‌ಗಳಿಗೆ ಹೆಚ್ಚಿನ ಪ್ರಯೋಜನ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ, ಪೂರ್ವ ನಗರ ಪಾಲಿಕೆಯನ್ನು ರಚಿಸಲಾಗಿದೆ ಎಂದರು.
ರಾಜ್ಯ ಸರ್ಕಾರವು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(CSR) ನೀತಿಯನ್ನು ರೂಪಿಸುತ್ತಿದೆ. ಅವರು (ಕೈಗಾರಿಕೆಗಳು) ಅವರು ತಮ್ಮ ಸಿಎಸ್ಆರ್ ನಿಧಿಯನ್ನು ಏನು ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಲಿ. ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಘೋಷಿಸಲಿ ಎಂದರು.
"ನಾನು ಅವರನ್ನು ಪ್ರಶ್ನಿಸಲು ಬಯಸುವುದಿಲ್ಲ, ಆದರೆ ಎಲ್ಲರೂ ಸ್ವಲ್ಪ ತಾಳ್ಮೆಯಿಂದಿರಬೇಕು. ಅವರು ಟ್ವೀಟ್ ಮಾಡಲು, ಬ್ಲ್ಯಾಕ್‌ಮೇಲ್ ಮಾಡಲು ಅಥವಾ ನಮಗೆ ಬೆದರಿಕೆ ಹಾಕಲು ಬಯಸಿದರೆ, ಅದು ಅವರಿಗೆ ಬಿಟ್ಟದ್ದು". ನಮ್ಮದು "ಪ್ರಗತಿಪರ ಮತ್ತು ಸಕಾರಾತ್ಮಕ" ಸರ್ಕಾರ ಎಂದರು.
Advertisement