
ಹಾಸನ: ರಾಜ್ಯ ಸಚಿವ ಸಂಪುಟ ಪುನಾರಚನೆ, ನವೆಂಬರ್ ನಲ್ಲಿ ರಾಜಕೀಯದಲ್ಲಿ ಕ್ರಾಂತಿಯಾಗುತ್ತದೆ ಎಂಬ ಮಾತುಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೂಡಿ ನಿನ್ನೆ ಮಂಗಳವಾರ ರಾತ್ರಿ ವರ್ಷಕ್ಕೊಮ್ಮೆ ದರ್ಶನ ನೀಡುವ ದುರ್ಗೆಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಅಧಿಕಾರ ಹಂಚಿಕೆ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿರುವ ಹೊತ್ತಿನಲ್ಲಿ ಹಾಸನಾಂಬೆ ಸನ್ನಿಧಿಯಲ್ಲಿ ಡಿಕೆಶಿ ಕೈಗೊಂಡ ಪೂಜೆ ಹೊಸ ಚರ್ಚೆಗೆ ನಾಂದಿಹಾಡಿದೆ.
ಖಡ್ಗಮಾಲಾ ಸ್ತೋತ್ರ ಪಠಣೆ, ನಾರಾಯಣಿ ಮಂತ್ರದೊಂದಿಗೆ ಪೂಜೆ
ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಪತ್ನಿ ಉಷಾ ಅವರ ಜೊತೆ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷ ಆಸೀನರಾಗಿ ವಿಶೇಷ ಪೂಜೆ ಸಲ್ಲಿಸಿದರು. ಶಕ್ತಿಯುತವಾದ ನಾರಾಯಣಿ ನಮಸ್ಕಾರ ಮಂತ್ರ ಮತ್ತು ಖಡ್ಗಮಾಲಾ ಸ್ತ್ರೋತ್ರ ಪಠಿಸಿದರು. ನಾರಾಯಣಿ ನಮಸ್ಕಾರ ಮಂತ್ರ ದುರ್ಗಾ ಸಪ್ತಷತಿಯ 11ನೇ ಅಧ್ಯಾಯದಲ್ಲಿ ಬರುವ ಮಂತ್ರವಾಗಿದೆ. ಇದು ಅತ್ಯಂತ ಪ್ರಬಲ ಪೂಜೆಯಾಗಿದ್ದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಚಂಡಿಕಾ ಹೋಮ ಮಾಡುವ ವೇಳೆ ಪಠಿಸುವ ಮಂತ್ರವಾಗಿದೆ. ಸುಮಾರು 5 ನಿಮಿಷಗಳ ಕಾಲ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದಾರೆ.
ಡಿಕೆಶಿ ಏನೆಂದರು?
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸುದ್ದಿಗಾರರಿಂದ ಸಹಜವಾಗಿ ಅಧಿಕಾರದ ಬಗ್ಗೆ ಪ್ರಶ್ನೆ ಬಂತು. ನೀವು ಹೆಚ್ಚಿನ ಅಧಿಕಾರ ಸಿಗಲು ಬೇಡಿಕೊಂಡಿರಾ ಎಂಬ ಪ್ರಶ್ನೆಗೆ ಮೊದಲಿಗೆ, ನಿಮಗೆ-ನಮಗೆ ಎಲ್ಲರಿಗೂ ಕೂಡ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು. ಬಳಿಕ ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವಂತಹ ಸ್ಥಳ ದೇವಾಲಯ. ನಾನುಂಟು ಆ ತಾಯಿ ಉಂಟು. ನಾನುಂಟು ಭಕ್ತರುಂಟು ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಕಳೆದ ವರ್ಷ ಖಡ್ಗಮಾಲಾ ಸ್ತ್ರೋತ್ರ ಪಠಿಸಿದ್ದ ಸಿಎಂ ಸಿದ್ದರಾಮಯ್ಯ
ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಕೂಡ ಹಾಸನಾಂಬೆ ದೇವಿ ದರ್ಶನ ಪಡೆದು ಇದೇ ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದರು. ಮುಡಾ ಹಗರಣದ ಸುಳಿಯಲ್ಲಿ ಸಿಲುಕಿದ್ದ ವೇಳೆ ಈ ಪೂಜೆ ಸಲ್ಲಿಸಿದ್ದರು. ನಂತರ ಮುಡಾ ಆರೋಪದಿಂದ ಮುಕ್ತರಾಗಿದ್ದು, ತನಿಖೆಯಲ್ಲಿ ಕ್ಲೀನ್‌ಚಿಟ್ ಸಿಕ್ಕಿತು.
Advertisement