
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎ.ಐ) ಮೂಲಸೌಕರ್ಯ ಕೇಂದ್ರ ನಿರ್ಮಾಣಕ್ಕಾಗಿ ಆಂಧ್ರಪ್ರದೇಶದಲ್ಲಿ ಒಟ್ಟು 15 ಬಿಲಿಯನ್ ಡಾಲರ್ (ಸರಿಸುಮಾರು ₹1.33 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಗೂಗಲ್ ಕಂಪನಿಯು ಮಂಗಳವಾರ ಘೋಷಿಸಿದೆ. ಇದು ಭಾರತದಲ್ಲಿ ಗೂಗಲ್ ಕಂಪನಿಯ ಅತಿ ದೊಡ್ಡ ಹೂಡಿಕೆಯಾಗಿದೆ.
ಇದನ್ನೇ ಉಲ್ಲೇಖ ಮಾಡಿರುವ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷ, 'ರಾಜ್ಯದ ಕೈತಪ್ಪಿದ ಗೂಗಲ್ ಎ.ಐ ಹಬ್ ಆಂಧ್ರ ಪಾಲಾಗಿದೆ' ಎಂದು ಆರೋಪಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗ್ರಹಣ ಹಿಡಿದಿದೆ. ಬೆಂಗಳೂರಿನ ಗುಂಡಿಗಳು, ಐಟಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷತನದಿಂದ ₹1.3 ಲಕ್ಷ ಕೋಟಿ ಹೂಡಿಕೆಯ ಯೋಜನೆಯೊಂದು ರಾಜ್ಯದ ಕೈತಪ್ಪಿದ್ದು, ಕರ್ನಾಟಕಕ್ಕೆ ದೊಡ್ಡ ಹೊಡೆತ ಬಿದ್ದಿದೆ' ಎಂದು ಹೇಳಿದೆ.
'ಜಾಗತಿಕ ಟೆಕ್ ದಿಗ್ಗಜ ಗೂಗಲ್ ವಿಶಾಖಪಟ್ಟಣದಲ್ಲಿ ಸುಮಾರು ₹1.3 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ ಎ.ಐ ಹಬ್ ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 30,000 ಉದ್ಯೋಗ ಜೊತೆಗೆ ವಾರ್ಷಿಕ ₹10,000 ಕೋಟಿ ಆದಾಯ ಗಳಿಸಬಹುದಾಗಿದ್ದ ಯೋಜನೆಯು ಕರ್ನಾಟಕದ ಕೈತಪ್ಪಿ ಅನ್ಯ ರಾಜ್ಯಕ್ಕೆ ಹೋಗಿದೆ' ಎಂದು ಆರೋಪಿಸಿದೆ.
'ಗಾರ್ಡನ್ ಸಿಟಿಯ ರಸ್ತೆ ಗುಂಡಿ, ಕಸ ಹಾಗೂ ಮೂಲ ಸೌಕರ್ಯ ಸಮಸ್ಯೆ ಕಾರಣಕ್ಕೆ ಕಾರ್ಪೊರೇಟ್ ವಲಯದ ಕೆಂಗಣ್ಣಿಗೆ ಗುರಿಯಾಗಿರುವ ಸಮಯದಲ್ಲೇ ಜಾಗತಿಕ ಬೃಹತ್ ಹೂಡಿಕೆಯ ಯೋಜನೆ ನೆರೆ ರಾಜ್ಯ ಆಂದ್ರ ಪಾಲಾಗಿದೆ' ಎಂದು ಟೀಕಿಸಿದೆ.
'ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದನ್ನು ಬಿಟ್ಟು ಉದ್ಯಮಿಗಳು ಬೆಂಗಳೂರು ಬಿಟ್ಟು ಹೋದರೆ ಹೋಗಲಿ ಎಂದು ಧಮ್ಕಿ ಹಾಕುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ನಿಷ್ಪ್ರಯೋಜಕ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಗೂಗಲ್ ಎ.ಐ ಹಬ್ ಕರ್ನಾಟಕದ ಕೈತಪ್ಪಲು ನೀವು ಮತ್ತು ನಿಮ್ಮ ಸರ್ಕಾರದ ನಿರ್ಲಕ್ಷತನವೇ ಕಾರಣ' ಎಂದಿದೆ.
ಇನ್ನೂ ಇದೇ ವಿಷಯವಾಗಿ ಟ್ವೀಟ್ ಮಾಡಿರುವ ಮಾಜಿ ಸಚಿವ ಬಿ. ಶ್ರೀರಾಮುಲು, ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಸಿಎಂ,- ಡಿಸಿಎಂ ಕುರ್ಚಿ ಕಾಳಗದಲ್ಲಿ ರಾಜ್ಯಕ್ಕೆ ಬರಬೇಕಾಗಿದ್ದ ಉದ್ಯಮವು ಬೇರೆ ರಾಜ್ಯದತ್ತ ಮುಖ ಮಾಡಿರುವುದು ಕರ್ನಾಟಕ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಯಾವುದೇ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಾಗ ಅವರಿಗೆ ಕೆಂಪು ರತ್ನಗಂಬಳಿ ಹಾಕಿ ಸ್ವಾಗತಿಸುವುದು ಜವಾಬ್ದಾರಿತ ಸರ್ಕಾರದ ಕೆಲಸವಾಗಿದೆ. ಉದ್ಯೋಗ ಸೃಷ್ಟಿದರೆ ಸ್ಥಳೀಯರಿಗೆ, ಅವಕಾಶ ಸಿಕ್ಕಿದರೆ, ನಿರುದ್ಯೋಗ ನಿವಾರಣೆಯಾಗಲಿದೆ.
ಆದರೆ, ಎತ್ತು ಏರಿಗೆ, ಕೋಣ ಕೆರೆಗೆ ಎಂಬಂತಾಗಿರುವ ಇಲ್ಲಿನ ಸರ್ಕಾರದಲ್ಲಿ ತಾಳ ಮೇಳ ಎಲ್ಲ ಎಲ್ಲವೂ ಕೈತಪ್ಪಿದ್ದು ಕಮಿಷನ್ ಹೊಡೆಯುವುದೇ ಆದ್ಯತೆ ಆಗಿರುವುದರಿಂದ ಉದ್ಯಮಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕಿ ಬೇರೆ ಕಡೆ ಹೋಗುತ್ತಿರುವುದಕ್ಕೆ ನಿಮಗೆ ಕನಿಷ್ಠಪಕ್ಷ ನಾಚಿಕೆ ಆಗುವುದಿಲ್ಲವೇ. ?
ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹಾಳುಬಿದ್ದಿರುವ ರಸ್ತೆಗಳ ಸುಧಾರಣೆ, ಗುಂಡಿ ಮುಚ್ಚಿ ಎಂದು ಯಾರಾದರೂ ಹೇಳಿದರೆ ಅವರನ್ನೇ ಗುರಿಯಾಗಿಟ್ಟುಕೊಂಡು ತೇಜೋವದೆ ಮಾಡಿದರೆ ಯಾರಾದರೂ ರಾಜ್ಯಕ್ಕೆ ಬಂಡವಾಳ ಹೂಡಲು ಬರುತ್ತಾರೆಯೇ? ಇಂತಹ ಕೆಟ್ಟ ಸರ್ಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ !
ಮಾಹಿತಿ ತಂತ್ರಜ್ಞಾನದ ರಾಜಧಾನಿಯಿಂದ ಗುರುತಿಸಿಕೊಂಡಿದ್ದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಗುಂಡಿ ಹಾಗೂ ಕಸದ ನಗರವೆಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಕರ್ನಾಟಕದ ಮಾನ ಹರಾಜು ಹಾಗೂ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು.
ಊರಿಗೆ ಊರೇ ಹೋದರು ನನಗೇನು ಎಂಬತ್ತಿರುವ ಸಿಎಂ ಅವರಿಗೆ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಅದನ್ನು ಹೇಗೆ ಕಿತ್ತುಕೊಳ್ಳಬೇಕೆಂಬ ದುರಾಲೋಚನೆಯಲ್ಲಿ ಡಿಸಿಎಂ ಇದ್ದಾರೆ. ಪರಿಣಾಮ ಕರ್ನಾಟಕದ ಕಡೆ ಉದ್ಯಮಿಗಳು ಟಾಟಾ ಮಾಡುವಂತಾಗಿದೆ.
ಅಲ್ಲ ಸ್ವಾಮಿ ನಿಮ್ಮ ಕೈಯಲ್ಲಿ ಬೆಂಗಳೂರು ಉಸ್ತುವಾರಿ ನಿಭಾಯಿಸಲು ಆಗದಿದ್ದರೆ ಇಲ್ಲದ ಹೊಸ ಬಾರಿಯನ್ನು ನೀವೇಕೆ ವಹಿಸಿಕೊಂಡಿರಿ.? ಕೇವಲ ಲುಲು ಮಾಲ್ ಅಭಿವೃದ್ದಿಯಾದರೆ ಸಾಲದು. ಜೊತೆಗೆ ಬೆಂಗಳೂರು ಅಭಿವೃದ್ಧಿಪಡಿಸಬೇಕೆಂಬ ದೂರದೃಷ್ಟಿ ಇರಬೇಕು ಎಂದು ಟೀಕಿಸಿದ್ದಾರೆ.
Advertisement