ರಾಜ್ಯ ಸರ್ಕಾರ ಬಿ-ಖಾತಾ ನಿವೇಶನಗಳನ್ನು ಎ-ಖಾತಾ ಆಗಿ ಪರಿವರ್ತಿಸಲು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ನವೆಂಬರ್ 1 ರಿಂದ 100 ದಿನಗಳ ಅಭಿಯಾನ ಆರಂಭವಾಗಲಿದೆ. ಆಸ್ತಿ ಮಾಲೀಕರು ಆಸ್ತಿಯ ಗೈಡೆನ್ಸ್ ದರದ ಶೇಕಡಾ 5 ರಷ್ಟನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಈ ಹೊಸ ಆನ್ ಲೈನ್ ವ್ಯವಸ್ಥೆಯು 2 ಸಾವಿರ ಚ.ಮೀ. ವಿಸ್ತೀರ್ಣದ ಆಸ್ತಿಗಳಿಗೆ ಅನ್ವಯಿಸುತ್ತದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಘೋಷಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಈ ಹಿಂದೆ ಇದ್ದ ಶೇಕಡ 35ರಷ್ಟು ಅಂಕಗಳ ನಿಯಮವನ್ನು ಈ ವರ್ಷದಿಂದ ಶೇಕಡ 33ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ. ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ 3 ಪರೀಕ್ಷೆ ವ್ಯವಸ್ಥೆ ಜಾರಿ ಮಾಡಿದ್ದೇವೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ ಶೇ. 33 ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 2025-26ನೇ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ. ಈ ವರ್ಷ ಹಾಜರಾಗೋ ಎಲ್ಲಾ ವಿದ್ಯಾರ್ಥಿಗಳು, ರಿಪೀಟರ್ಸ್, ಖಾಸಗಿ ಅಭ್ಯರ್ಥಿಗಳಿಗೂ ಈ ನಿಯಮ ಜಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರಿ ಶಾಲೆ, ಕಾಲೇಜು ಆವರಣಗಳಲ್ಲಿ ಆರ್‌ಎಸ್ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಆರ್‌ಎಸ್‌ಎಸ್ ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ, ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಎಂದು ಪ್ರಶ್ನಿಸಿದ್ದು ವಿಡಿಯೋ ಹಂಚಿಕೊಂಡಿದ್ದಾರೆ. ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತವರ ಕುಟುಂಬದವರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈ ಕುರಿತು ತನಿಖೆಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಈಮಧ್ಯೆ, ಆರ್.ಎಸ್.ಎಸ್ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತೊಂದರೆ ಕೊಟ್ಟು ನಡೆಸುತ್ತಿರುವ ಎಲ್ಲಾ ಸಂಘಟನೆಗಳನ್ನು ನಿರ್ಬಂಧಿಸುವ ಬಗ್ಗೆ ಯೋಜನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಜನರಲ್ ಸರ್ಜನ್ ಆಗಿರುವ ಡಾ. ಮಹೇಂದ್ರರೆಡ್ಡಿ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಈತ ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ವಿಷಯ ತನಿಖೆ ವೇಳೆ ಬಯಲಾಗಿದೆ. 2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರಿಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಮದುವೆ ಮಾಡಿದ್ದರು. ಮದುವೆ ಬಳಿಕ ಪತ್ನಿಯ ಆರೋಗ್ಯ ಸಮಸ್ಯೆ ವಿಷಯ ಮಹೇಂದ್ರ ರೆಡ್ಡಿಗೆ ಗೊತ್ತಾಗಿತ್ತು. ಪತ್ನಿಯನ್ನ ಮಹೇಂದ್ರರೆಡ್ಡಿ ಇಂಜೆಕ್ಷನ್ ನೀಡಿ ಕೊಂದು ಸಹಜ ಸಾವು ಎಂದು ಬಿಂಬಿಸಿದ್ದ. ಕೃತಿಕಾ ಸಾವಿಗೆ ಸಂಬಂಧಿಸಿದಂತೆ ಆಕೆಯ ತಂದೆ ಮುನಿರೆಡ್ಡಿ ಎಂಬುವವರು ಪೊಲೀಸ್ ದೂರು ದಾಖಲಿಸಿದ್ದರು.
ಬೆಂಗಳೂರಿನಲ್ಲಿ ಗುಂಡಿಬಿದ್ದ, ಹದಗೆಟ್ಟ ರಸ್ತೆಗಳ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ನಾಗರಿಕರ ಗುಂಪೊಂದು ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂದು ಬೆದರಿಕೆ ಹಾಕಿದೆ. ಆದಾಯ ತೆರಿಗೆ ಪಾವತಿದಾರರು ಮತ್ತು ತಮ್ಮ ಹಕ್ಕುಗಳ ಪರ ವಕೀಲರನ್ನು ಪ್ರತಿನಿಧಿಸುವ "ವೈಯಕ್ತಿಕ ತೆರಿಗೆ ಪಾವತಿದಾರರ ವೇದಿಕೆ"ಯಡಿಯಲ್ಲಿ, ವರ್ತೂರು-ಬಳಗೆರೆ-ಪಣತ್ತೂರು ಪ್ರದೇಶದ ನಿವಾಸಿಗಳು, ಮುಖ್ಯಮಂತ್ರಿಗಳಿಗೆ ಬರೆದ ಅಕ್ಟೋಬರ್ 13 ರಂದು ಬರೆದ ಪತ್ರದಲ್ಲಿ, ಪುರಸಭೆಯ ಅಧಿಕಾರಿಗಳು ತಮ್ಮ ಪ್ರದೇಶಗಳಲ್ಲಿ ನಡೆಸುತ್ತಿರುವ "ಅವೈಜ್ಞಾನಿಕ ಮತ್ತು ಕಳಪೆ ಸಮನ್ವಯ"ದ ರಸ್ತೆ ವೈಟ್‌ಟಾಪಿಂಗ್ ಮತ್ತು ಮಳೆನೀರಿನ ಒಳಚರಂಡಿ ಕಾಮಗಾರಿಗಳಿಂದ ತಾವು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿವಾಸಿಗಳಿಂದ ಆಸ್ತಿ ತೆರಿಗೆ ಸಂಗ್ರಹಿಸದಂತೆ ನಿರ್ದೇಶಿಸಬೇಕೆಂದು ನಾಗರಿಕ ವೇದಿಕೆ ಒತ್ತಾಯಿಸಿದೆ.
Advertisement