
ಬೆಂಗಳೂರು: ದೇಶದಲ್ಲಿ ಹಿಂದಿ ಭಾಷೆ ಹೇರಿಕೆ, ರಾಷ್ಟ್ರಭಾಷೆ ಜಿಜ್ಞಾಸೆ, ತ್ರಿಭಾಷಾ ಸೂತ್ರ ಇತ್ಯಾದಿಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಕಳೆದ ವರ್ಷ ಲೋಕಸಭಾ ಚುನಾವಣೆಯ ವೇಳೆ ಹಲವು ವಿರೋಧ ಮತ್ತು ಒತ್ತಡಗಳ ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸೋಮಣ್ಣಗೆ ಒಲಿದಿತ್ತು. ಅದಕ್ಕಿಂತ ಹಿಂದೆ ಅಂದರೆ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ, ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿನ ಲೆಕ್ಕಾಚಾರ ಫಿಫ್ಟಿ ಫಿಫ್ಟಿ ಎಂದು ಹೇಳಲಾಗುತ್ತಿತ್ತು.
ನಂತರ ತುಮಕೂರು ಲೋಕಸಭಾ ಕ್ಷೇತ್ರದಿಂದ 1,75,594 ಮತಗಳ ಭಾರೀ ಅಂತರದಿಂದ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಕಾಂಗ್ರೆಸ್ಸಿನ ಎಸ್.ಪಿ.ಮುದ್ದಹನುಮೇಗೌಡ ಅವರ ವಿರುದ್ದ ಸೋಮಣ್ಣ ಗೆಲುವನ್ನು ಸಾಧಿಸಿದ್ದರು. ಆ ವೇಳೆ, ರಾಷ್ಟ್ರಪತಿ ಭವನದ ಸಮೀಪ ನಡೆದ ವಿದ್ಯಮಾನವೊಂದನ್ನು ಸ್ವತಃ ಸೋಮಣ್ಣ ಬಹಿರಂಗಪಡಿಸಿದ್ದಾರೆ.
ಮಂತ್ರಿಗಿರಿ ಬೇಡ ಎಂದಿದ್ದ ಸೋಮಣ್ಣ
ಗೆಲುವಿನ ಖುಷಿಯಲ್ಲಿದ್ದ ಸೋಮಣ್ಣ ಅವರಿಗೆ ದೆಹಲಿಗೆ ಬರುವಂತೆ, ಬಿಜೆಪಿ ಕೇಂದ್ರ ಕಚೇರಿಯಿಂದ ಪೋನ್ ಬಂತಂತೆ. ಅಲ್ಲಿ ಹೋದಾಗ, ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾಹಿತಿ ದೊರೆತ ಸೋಮಣ್ಣ, ಪ್ರಧಾನಿ ಮೋದಿಯವರ ಬಳಿ, ನಾನು ಸಂಸದನಾಗಿಯೇ ಇರುತ್ತೇನೆ, ಮಂತ್ರಿಗಿರಿ ಬೇಡ ಎಂದಿದ್ದರಂತೆ.
ನಾವು ಹಳ್ಳಿಯಿಂದ ಬಂದವರು, ಕನ್ನಡ ಸರ್ಕಾರಿ ಶಾಲೆಯಲ್ಲಿ ಓದಿದವರು. ನಾವು ಶಾಲೆಗೆ ಹೋಗುತ್ತಿದ್ದ ವೇಳೆ, ಹಿಂದಿ ಇರಲಿಲ್ಲ. ಹಾಗಾಗಿ, ನನಗೆ ಹಿಂದಿ ಬರುತ್ತಿರಲಿಲ್ಲ. ಪ್ರಧಾನಿಯವರು ಕರೆದ ಹಿನ್ನಲೆಯಲ್ಲಿ ಅಲ್ಲಿಗೆ ಹೋದೆ. ನಿಮ್ಮನ್ನು ಮಂತ್ರಿ ಮಾಡುತ್ತಿದ್ದೇವೆ, ಅದಕ್ಕೆ ತಯಾರಿಗಿರಿ ಎಂದು ಹೇಳಿದರು. ನನಗೆ ಒಂದು ಕ್ಷಣ ಶಾಕ್, ಆದರೂ, ನನಗೆ ಮಂತ್ರಿಗಿರಿ ಬೇಡ ಎಂದೆ. ಅದಕ್ಕೆ ಯಾಕೆ ಎಂದು ಕೇಳಿದರು, ಆಗ ನಾನು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದೆ ಎಂದು ಸೋಮಣ್ಣ ಹೇಳಿದರು.
ಭಾಷೆಗಿಂತ ಕಾಮನ್ ಸೆನ್ಸ್ ಮುಖ್ಯ
ಯಾವುದು ಭಾಷೆ, ಎಲ್ಲಾ ಭಾಷೆಯೂ ಒಂದೇ. ನಮಗಿರಬೇಕಾದ ಒಂದು ಭಾಷೆ ಎಂದರೆ ಅದು ಕಾಮನ್ ಸೆನ್ಸ್. ಹೋಗಿ, ಪ್ರಮಾಣವಚನ ಸ್ವೀಕರಿಸಲು ಸಿದ್ದತೆಯನ್ನು ಮಾಡಿಕೊಳ್ಳಿ. ನೀವು ಉತ್ತಮವಾಗಿ ಕೆಲಸ ಮಾಡುತ್ತೀರಾ ಎನ್ನುವ ನಂಬಿಕೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು ಎಂದು ಸೋಮಣ್ಣ ನೆನಪಿಸಿಕೊಳ್ಳುತ್ತಾರೆ.
Advertisement