
ಮೈಸೂರು: ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿ ಎಲ್ಲದಕ್ಕೂ ಮಾನದಂಡಗಳಿವೆ. ಹೀಗಿರುವಾಗ ಮಹಿಳೆಯರಿಗೆ ಯಾವುದೇ ಮಾನದಂಡವಿಲ್ಲದೆ ಪ್ರತಿ ತಿಂಗಳು 2 ಸಾವಿರ ಹಣ ಕೊಡುವಾಗ ಯಾವ ಮಾನದಂಡ ಅನುಸರಿಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಎಂಎಲ್ ಸಿ ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿದರು. ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಅಂತಾರೆ. ಇದು ಯಾರ ಅಪ್ಪನ ಮನೆ ದುಡ್ಡಲ್ಲ ಸಿದ್ದರಾಮಯ್ಯನವರೇ, ಜನರ ತೆರಿಗೆ ಹಣವಾಗಿದೆ.
ರಾಜ್ಯದ ಜನತೆ ಬೆವರು ಹರಿಸಿ ದುಡಿದು ಕಟ್ಟಿರುವ ಹಣವಾಗಿದೆ, ಈ ಮಂತ್ರಿಗಳೆಲ್ಲ ಯಾಕೆ ಬಾಯಿಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ. ಮಂತ್ರಿಗಳೇನು ಸಿಎಂ ಗುಲಾಮರಾ ಎಂದು ವಿಶ್ವನಾಥ್ ಕಿಡಿ ಕಾರಿದ್ದಾರೆ. ಮಹಿಳೆಯರಿಗೆ 2 ಸಾವಿರ ರು ಹಣ ನೀಡುವ ಬದಲು ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಗೊಳಿಸಿದ್ದರೇ ಸಾವಿರಾರು ಮಂದಿಗೆ ಕೆಲಸ ಸಿಗುತ್ತಿತ್ತು.ಆ ಕೆಲಸ ಮಾಡುವ ಬದಲು ಸಿದ್ದರಾಮಯ್ಯ ಹುಚ್ಚುತನ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.33 ರಷ್ಟು ಅಂಕ ನಿಗದಿ ಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಅವರು, ಶಿಕ್ಷಣದ ಗುಣಮಟ್ಟ ಇದರಿಂದ ಕುಸಿಯುತ್ತದೆ. ಸರ್ಕಾರಕ್ಕೆ ತಲೆ ಇಲ್ಲದೆ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
Advertisement