
ಆಳಂದ: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ನಡೆದ "ಮತಗಳ್ಳತನ" ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(SIT), ಶುಕ್ರವಾರ ಆಳಂದ ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ.
ಉಪ ಪೊಲೀಸ್ ಅಧಿಕಾರಿ ಅಲ್ಸಾನ್ ಬಾಷಾ ನೇತೃತ್ವದ SIT ತಂಡ, 20 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಕಲಬುರ್ಗಿಯ ಗುಬ್ಬಿ ಕಾಲೋನಿಯಲ್ಲಿರುವ ಗುತ್ತೇದಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರಿಗೆ ಸಂಬಂಧಿಸಿದ ಮೂರು ಮನೆಗಳ ಮೇಲೆ ಇಂದು ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಮತ್ತು ಸುಭಾಷ್ ಗುತ್ತೇದಾರ್ ಅವರ ಪುತ್ರರಾದ ಸಂತೋಷ್ ಗುತ್ತೇದಾರ್ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸಿನ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ ಮಹಾಂತಗೋಳ್ ಅವರ ನಿವಾಸದ ಮೇಲೂ ಎಸ್‌ಐಟಿ ದಾಳಿ ನಡೆಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆಗೆ ಮಲ್ಲಿಕಾರ್ಜುನ ಅವರು, ಅಕ್ರಂ ಎಂಬ ವ್ಯಕ್ತಿಗೆ ಡೀಲ್ ಕೊಟ್ಟಿದ್ದರು ಎನ್ನುವ ವಿಚಾರ ತಿಳಿದುಬಂದಿದೆ. ಹೀಗಾಗಿ ಎಸ್ಐಟಿ ಮಲ್ಲಿಕಾರ್ಜುನ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ನಿನ್ನೆಯಷ್ಟೇ ಎಸ್ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಅಕ್ರಂ ಎನ್ನುವಾತನ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿದ್ದವು. ಒಟ್ಟು 15 ಮೊಬೈಲ್ ಫೋನ್, 7 ಲ್ಯಾಪ್ ಟಾಪ್ಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇಂದು ಎಸ್ಐಟಿ, ಬಿಜೆಪಿ ಮಾಜಿ ಶಾಸಕರ ಮನೆ ಮೇಲೂ ದಾಳಿ ನಡೆಸಿದೆ.
2023ರ ವಿಧಾಸಭಾ ಚುನಾವಣೆ ವೇಳೆ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು.
Advertisement