
ಬೆಂಗಳೂರು: ರಾಜ್ಯ ಸರ್ಕಾರ ಡಿ. 1 ರೊಳಗೆ ರೂ. 33,000 ಕೋಟಿ ಮೊತ್ತದ ಬಾಕಿ ಮೊತ್ತವನ್ನು ಪಾವತಿಸಲು ರಾಜ್ಯ ಗುತ್ತಿಗೆದಾರರ ಸಂಘ ಗಡುವನ್ನು ನೀಡಿದೆ. ಇಲ್ಲದಿದ್ದರೆ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಸಂಘ ಬೆದರಿಕೆ ಹಾಕಿದೆ.
ಇನ್ನೂ 44 ದಿನ ಕಾಯುತ್ತೇವೆ: ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ನಾವು ಎರಡೂವರೆ ವರ್ಷದಿಂದ ಕಾಯುತ್ತಿದ್ದೇವೆ. ಇನ್ನೂ 44 ದಿನ ಕಾಯುತ್ತೇವೆ. ಆ ನಂತರ ನಾವು ಕಾಮಗಾರಿ ಸ್ಥಗಿತಗೊಳಿಸುವುದು ಮಾತ್ರವಲ್ಲದೇ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಮಧ್ಯಸ್ಥಿಕೆಗೆ ಮನವಿ ಮಾಡುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಡಿಸೆಂಬರ್ ನಲ್ಲಿ ರಾಜ್ಯಪಾಲರಿಗೆ ದೂರು:
ಗೌರಿ-ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಬಾಕಿ ಹಣ ಹಾಗೂ ಬೋನಸ್‌ಗೆ ಬೇಡಿಕೆ ಇಡುವುದರಿಂದ ಗುತ್ತಿಗೆದಾರರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡುವಷ್ಟು ಪರಿಸ್ಥಿತಿ ಭೀಕರವಾಗಿದೆ ಎಂದು ಸಂಘ ಹೇಳಿಕೊಂಡಿದೆ. ಹಬ್ಬದ ನಂತರ ಸಭೆ ನಡೆಸುತ್ತೇವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ, ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಡಿಸೆಂಬರ್‌ನಲ್ಲಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ಮಂಜುನಾಥ್ ಎಚ್ಚರಿಸಿದ್ದಾರೆ. ಭ್ರಷ್ಟಾಚಾರ ಇನ್ನೂ ಮುಂದುವರಿದಿದೆ. ಆದರೆ ತಮ್ಮ ಮುಖ್ಯ ಗಮನವು ಬಾಕಿ ಉಳಿದಿರುವ ಬಾಕಿಗಳನ್ನು ಬಗೆಹರಿಸುವುದಾಗಿದೆ ಎಂದು ಸಂಘ ಹೇಳಿದೆ.
ಹಣ ಬಿಡುಗಡೆ ವಿಚಾರದಲ್ಲಿ ಕಮಿಷನ್ ದುಪ್ಪಟ್ಟಾಗಿದೆ ಎಂದು ಪತ್ರದಲ್ಲಿ ಹೇಳಿದ್ದೇನೆ, ಶೇ. 40, ಶೇ. 60, ಶೇ. 80 ಅಂತಾ ಹೇಳಿಲ್ಲ. ಸಣ್ಣ ಗುತ್ತಿಗೆದಾರರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಂಚವಿಲ್ಲ ಎಂದು ನಾನು ಹೇಳುತ್ತಿಲ್ಲ, ಎಲ್ಲಾ ವಿಚಾರಗಳನ್ನು ಡಿಸೆಂಬರ್ ನಲ್ಲಿ ಬಹಿರಂಗಪಡಿಸುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.
ಐದರಿಂದ ಆರು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಸಚಿವ ಸಂಪುಟದ ಪ್ರತಿ ಸಚಿವರನ್ನು ಭೇಟಿ ಮಾಡಿದ್ದೇವೆ, ಆದರೆ ಬಾಕಿ ಉಳಿದಿರುವ ಸಮಸ್ಯೆಯನ್ನು ಪರಿಹರಿಸಲಾಗಿಲ್ಲ.‘ಪಿಡಬ್ಲ್ಯುಡಿ ಇಲಾಖೆಯಲ್ಲಿ ₹ 9,000 ಕೋಟಿ ಬಾಕಿ ಇದೆ. ಸೀನಿಯರಿಟಿ ಆಧಾರದ ಮೇಲೆ ಹಣ ನೀಡುತ್ತಿದ್ದಾರೆ. ಉಳಿದ ಇಲಾಖೆಗಳಲ್ಲಿ ಆಗುತ್ತಿಲ್ಲ, ನೀರಾವರಿ ಇಲಾಖೆಯಿಂದ ₹ 12,000 ಕೋಟಿ ಬಾಕಿ ಇದೆ. ಒಟ್ಟಾರೆ ₹ 33,000 ಕೋಟಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆ ಹೊರತುಪಡಿಸಿದರೆ ಬೇರೆ ಯಾವುದೇ ಇಲಾಖೆಯಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ. ಇದನ್ನು ಸಿಎಂ ಮತ್ತು ಸಚಿವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
₹ 50 ಕೋಟಿ ಮೊತ್ತದ ಒಂದು ಬಿಲ್ ಸಿಎಂ ಕ್ಲಿಯರ್ ಮಾಡಬೇಕು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯು ಗುರುವಾರದಿಂದ ಹಂತ ಹಂತವಾಗಿ ಬಾಕಿ ಬಿಡುಗಡೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ₹ 50 ಕೋಟಿ ಮೊತ್ತದ ಒಂದು ಬಿಲ್ ಅನ್ನು ಸಿಎಂ ಕ್ಲಿಯರ್ ಮಾಡಬೇಕಿದೆ ಎಂದು ಮಂಜುನಾಥ್ ತಿಳಿಸಿದರು. ಲೋಕಾಯುಕ್ತದಿಂದ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನಿವೃತ್ತ ಅಧಿಕಾರಿ ಬಾಲರಾಜ್ ಅವರನ್ನು ವಸತಿ ಇಲಾಖೆಗೆ ನೇಮಕ ಮಾಡಲಾಗಿದೆ ಎಂದು ಸಂಘ ಆರೋಪಿಸಿದೆ. ಭ್ರಷ್ಟ ಅಧಿಕಾರಿಯನ್ನು ವಜಾಗೊಳಿಸುವಂತೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಮಾಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸಂಘ ದೂರಿದೆ.
ಪಕ್ಷ ಬೇಧವಿಲ್ಲದೆ ಸುಮಾರು 70 ಶಾಸಕರು ಸಿವಿಲ್ ಕಾಮಗಾರಿ ಗುತ್ತಿಗೆಗೆ ಕಡಿವಾಣ ಹಾಕಲು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಂಘದ ಗೌರವಾಧ್ಯಕ್ಷ ಜಗನ್ನಾಥ ಸೇಠಜಿ ಗಂಭೀರ ಆರೋಪ ಮಾಡಿದರು. ಕಲ್ಯಾಣ ಕರ್ನಾಟಕದಲ್ಲಿ ಪ್ಯಾಕೇಜ್ ಒಪ್ಪಂದಗಳಲ್ಲಿ ಶೇ. 15, ಶೇ. 20 ರಷ್ಟು ಕಮಿಷನ್ ಒಳಗೊಂಡಿರುವ ಭ್ರಷ್ಟಾಚಾರವಿದೆ. ಯಾವುದೇ ಸಚಿವರು ಭಾಗಿಯಾಗಿಲ್ಲ, ಮತ್ತು ಎಲ್ಲಾ ಶಾಸಕರು ಅದರ ಭಾಗವಾಗಿಲ್ಲ. ಹೈಕಮಾಂಡ್‌ಗೆ ಪತ್ರ ಬರೆದಾಗ ಆ ಎಲ್ಲಾ ಶಾಸಕರ ಹೆಸರನ್ನು ನಾವು ಉಲ್ಲೇಖಿಸುತ್ತೇವೆ. ಗುತ್ತಿಗೆದಾರರನ್ನು ಒಳಗೊಂಡ ಗಂಭೀರ ಅಕ್ರಮಗಳಿವೆ ಮತ್ತು ಗುಲ್ಬರ್ಗ ಡಿಎಂಎ ಪ್ಯಾಕೇಜ್ ಸೇರಿದಂತೆ ಎಲ್ಲಾ ನಾಲ್ಕು ಪ್ಯಾಕೇಜ್ ಯೋಜನೆಗಳನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಅವರು ಹೇಳಿದರು.
Advertisement