ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಜಲ ಸಮಾಧಿ
ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಅ. 16ರಂದು ನಡೆದಿದೆ.
ಮೃತರನ್ನು ಸ್ವಪ್ನಾ ರಾಜು ರಾಠೋಡ್ (10), ಶಿವಂ ರಾಜು ರಾಠೋಡ್ (8) ಹಾಗೂ ಕಾರ್ತಿಕ ಈಶ್ವರ ರಾಠೋಡ್ (8) ಎಂದು ಗುರುತಿಸಲಾಗಿದೆ. ಮಿಂಚನಾಳ ತಾಂಡಾದ ಮಾದೇವ ನಗರದ ಈ ಮೂವರು ಮಕ್ಕಳು ಮನೆಯ ಸಮೀಪದ ಹೊಲದ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಕ್ಕಳು ತುಂಬ ಹೊತ್ತಾದರೂ ಕಾಣಿಸದೇ ಇದ್ದಾಗ ಚಪ್ಪಲಿ ಗಮನಿಸಿ, ಹೊಂಡದಲ್ಲಿ ಶೋಧ ನಡೆಸಿದ ಬಳಿಕ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಸ್ವಪ್ನಾ, ಶಿವಂ ಒಂದೇ ಕುಟುಂಬದವರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೂವರು ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೆ ಮಕ್ಕಳು ಕುರಿಗಳೊಂದಿಗೆ ಆಟವಾಡುತ್ತಾ ಕೃಷಿ ಹೊಂಡದ ಬಳಿ ತೆರಳಿದ್ದರು. ಆಟದ ವೇಳೆ ಕಾಲು ಜಾರಿ ಆಯತಪ್ಪಿ ಮೂವರು ಒಟ್ಟಿಗೆ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಮೇಲೆ ಬರಲಾಗದೆ, ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ