
ವಿಜಯಪುರ: ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ಹೊರವಲಯದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ರೌಡಿ ಶೀಟರ್ ಯೂನಸ್ ಇಕ್ಲಾಸ್ ಪಟೇಲ್(35) ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅಪರಾಧಿ ಯೂನಸ್ ಗುರುವಾರ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ, ಅವರಿಂದ 25,000 ರೂ. ದೋಚಿ, ಅವರ ಬೈಕ್ ನೊಂದಿಗೆ ಪರಾರಿಯಾಗಿದ್ದ. ಈ ದರೋಡೆಗೆ ಸಂಬಂಧಿಸಿದಂತೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯೂನಸ್, ಅಲ್ಮೆಲ್ ತಾಲ್ಲೂಕಿನ ತನ್ನ ಹುಟ್ಟೂರಾದ ದೇವಾಂಗಾಂವ್ ಗ್ರಾಮದ ಕಡೆಗೆ ಹೋಗುತ್ತಿದ್ದಾನೆ ಎಂಬ ಖಚಿತ ಮಾಹಿತಿ ದೊರೆತ ನಂತರ ಪೊಲೀಸ್ ತಂಡ ಇಂದು ರಾಂಪುರ ಬಳಿ ಆತನನ್ನು ತಡೆದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದಾಗ, ಆರೋಪಿ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಇನ್ಸ್‌ಪೆಕ್ಟರ್ ಪ್ರದೀಪ್ ತಳಕೇರಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಇನ್ಸ್‌ಪೆಕ್ಟರ್ ತಳಕೇರಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಕೆ ನೀಡಿದ್ದಾರೆ. ಆದರೆ ಆರೋಪಿ ತನ್ನ ದಾಳಿಯನ್ನು ಮುಂದುವರಿಸುತ್ತಿದ್ದಂತೆ, ಆತ್ಮರಕ್ಷಣೆಗಾಗಿ ಯೂನಸ್ ಕಾಲಿಗೆ ಗುಂಡು ಹಾರಿಸಿದರು.
ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಗೆ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ಆರೋಪಿಯು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಜವಾದ ಕಾರಣ ಬಹಿರಂಗವಾಗಲಿದೆ.
ಏತನ್ಮಧ್ಯೆ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು, ಯೂನಸ್ ದೀರ್ಘ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದು, ಆತನ ವಿರುದ್ಧ ಎರಡು ಕೊಲೆ ಮತ್ತು ಒಂದು ಕೊಲೆಯತ್ನ ಪ್ರಕರಣಗಳು ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
Advertisement