
ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಮತದಾನದ ವೇಳೆ ಹೈಡ್ರಾಮ ನಡೆದಿದೆ. ಮತಗಟ್ಟೆ ಬಳಿ ಜಾರಕಿಹೊಳಿ ಹಾಗೂ ಸವದಿ ಬಣಗಳ ನಡುವೆ ಹೊಡೆದಾಟ ನಡೆದಿದೆ. ಡೆಲಿಗೇಷನ್ ಫಾರ್ಮ್ ಕೊಡುತ್ತಿಲ್ಲ ಎಂದು ಆರೋಪಿಸಿ ಸವದಿ ಬಣದ ಬೆಣ್ಬಲಿಗರು ಕ್ಯಾತೆ ತೆಗೆದಿದ್ದು, ಜಾರಕಿಹೊಳಿ ಬಣದ ಅಭ್ಯರ್ಥಿ ವಿರುದ್ಧ ಆರೋಪ ಮಾಡಿ ಗಲಾಟೆ ಆರಂಭಿಸಿದ್ದಾರೆ.
ಮತದಾನ ಮಾಡಲು 40 ಡೆಲಿಗೇಷನ್ ಫಾರಂ ಕೊಡ್ತಿಲ್ಲ ಎಂದು ಜಾರಕಿಹೊಳಿ ಪೆನಲ್‌ನ ಅಭ್ಯರ್ಥಿ ಅಪ್ಪಾಸಾಹೇಬ್ ವಿರುದ್ಧ ಆರೋಪಿಸಿ ಬಸನಗೌಡ ಆಸಂಗಿ ಬೆಂಬಲಿಗರು ಬೆಳಗಾವಿಯ ಖಾಸಗಿ ಹೋಟೆಲ್‌ಗೆ ನುಗ್ಗಿದ್ದಾರೆ.
ಲಕ್ಷ್ಮಣ ಸವದಿ-ಕತ್ತಿ ಬಣದ ಬಸನಗೌಡ ಆಸಂಗಿ ರಾಯಬಾಗ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಕಣಕ್ಕಿಳಿದಿದ್ದು, ಹೋಟೆಲ್ ಮುಂದೆ ಮಾರಾಮಾರಿ ನಡೆದಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಕೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಗಲಾಟೆ ತಾರಕ್ಕೇರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಡಿಸಿಸಿ ಬ್ಯಾಂಕಿನ 16 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇಂದು ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಂದು ಸಂಜೆಯೇ ಫಲಿತಾಂಶ ಹೊರಬೀಳಲಿದೆ. ಅಥಣಿ ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ್ ಕುಮಠಳ್ಳಿ, ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ವಿರುದ್ಧ ಉತ್ತಮ ಪಾಟೀಲ ಸ್ಪರ್ಧಿಸಿದ್ದಾರೆ.
ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ರಾಜೀಂದ್ರ ಪಾಟೀಲ, ಚೆನ್ನಮ್ಮನ ಕಿತ್ತೂರಿನಲ್ಲಿ ನಾನಾ ಸಾಹೇಬ ಪಾಟೀಲ ವಿರುದ್ಧ ವಿಕ್ರಮ ಇನಾಮದರ, ರಾಯಬಾಗದಲ್ಲಿ ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಅಪ್ಪಾ ಸಾಹೇಬ ಕುಲಗೊಡೆ ವಿರುದ್ಧ ಬಸನಗೌಡ ಅಸಂಗಿ, ರಾಮದುರ್ಗದಲ್ಲಿ ಶ್ರೀಕಾಂತ ಢವಣ ವಿರುದ್ಧ ಮಲ್ಲಣ್ಣ ಯಾದವಾಡ ಹಾಗೂ ಬೈಲಹೊಂಗಲದಲ್ಲಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ್ ಸ್ಪರ್ಧಿಸಿದ್ದಾರೆ.
Advertisement