News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

1. ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕೇಂದ್ರದಲ್ಲಿ ನವೆಂಬರ್ 2 ರಂದು ಪಥಸಂಚಲನ ನಡೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಪಥಸಂಚಲನಕ್ಕೆ ಅನುಮತಿ ನೀಡುವ ಸಂಬಂಧ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ ಅಕ್ಟೋಬರ್​​ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.

ಚಿತ್ತಾಪುರದಲ್ಲಿ ಭಾನುವಾರ ಆರ್​ಎಸ್​ಎಸ್​​ ಪಥ ಸಂಚಲನ ನಡೆಯಬೇಕಿತ್ತು. ಆದರೆ ಅನುಮತಿ ನಿರಾಕರಿಸಿ ತಹಶೀಲ್ದಾರ್​ ನಾಗಯ್ಯ ಹಿರೇಮಠ ಹೊರಡಿಸಿದ್ದ ಆದೇಶದ ವಿರುದ್ಧ ಆರ್​ಎಸ್​ಎಸ್ ಕಾರ್ಯಕರ್ತರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು.

ಇನ್ನು RSS​ ಸೇರಿದಂತೆ ಇತರೆ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸರ್ಕಾರಿ ಜಾಗದಲ್ಲಿ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವುದಕ್ಕೆ ಪೂರ್ವಾನುಮತಿ ಕಡ್ಡಾಯವಾಗಿದ್ದು ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

2. DCC ಬ್ಯಾಂಕ್ ಚುನಾವಣೆ: ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ

ಡಿಸಿಸಿ ಬ್ಯಾಂಕ್ ಚುನಾವಣೆ ಮತದಾನದ ವೇಳೆ ಮತಗಟ್ಟೆ ಬಳಿ ಜಾರಕಿಹೊಳಿ ಹಾಗೂ ಸವದಿ ಬಣಗಳ ನಡುವೆ ಹೊಡೆದಾಟ ನಡೆದಿದೆ.

ಮತದಾನ ಮಾಡಲು 40 ಡೆಲಿಗೇಷನ್ ಫಾರಂ ಕೊಡುತ್ತಿಲ್ಲ ಎಂದು ಆರೋಪಿಸಿ ಜಾರಕಿಹೊಳಿ‌ ಬಣದ ಅಭ್ಯರ್ಥಿ ಅಪ್ಪಾಸಾಹೇಬ್ ವಿರುದ್ಧ ಆರೋಪಿಸಿ ಬಸನಗೌಡ ಆಸಂಗಿ ಬೆಂಬಲಿಗರು ಬೆಳಗಾವಿಯ ಖಾಸಗಿ ಹೋಟೆಲ್‌ಗೆ ನುಗ್ಗಿದ್ದು, ಹೋಟೆಲ್ ಮುಂದೆ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ. ಲಕ್ಷ್ಮಣ ಸವದಿ-ಕತ್ತಿ ಬಣದ ಬಸನಗೌಡ ಆಸಂಗಿ ರಾಯಬಾಗ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಕೆ ಮಾಡಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

3. Deepavali: ಬಾಗಲಕೋಟೆಯಲ್ಲಿ ಮನೆಯನ್ನೇ ಸುಟ್ಟು ಕರಕಲು ಮಾಡಿದ ಮನೆ ದೀಪ!

ದೇಶಾದ್ಯಂತ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು, ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್​​​ನಲ್ಲಿರುವ ಮನೆಯೊಂದರ ಬಾಗಿಲು ಎದುರು ಹಚ್ಚಿದ್ದ ದೀಪದಿಂದ ಬೆಂಕಿ ತಗುಲಿ ಏಳು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಮೇಶ್ ಮೇಟಿ​​ ಎಂಬುವವರ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದೇ ಕಟ್ಟಡದಲ್ಲಿ ರಾಜೇಂದ್ರ ತಪಶೆಟ್ಟಿ ಕುಟುಂಬ ಸೇರಿ ಮತ್ತೊಂದು ಕುಟುಂಬ ಬಾಡಿಗೆಗೆ ಇದ್ದರು. ರಾಜೇಂದ್ರ ತಪಶೆಟ್ಟಿ ಕುಟುಂಬಸ್ಥರು ಮನೆ ಎದುರು ದೀಪ ಹಚ್ಚಿದ್ದರು. ದೀಪದ ಬೆಂಕಿ ಮನೆ ಎದುರಿಗೆ ಬಿದ್ದ ಆಯಿಲ್​​ಗೆ ತಗುಲಿ ಬೆಂಕಿ ಹೊತ್ತಿದೆ. ಮನೆ ಮುಂದಿನ ಎರಡು ಬೈಕ್ ಸುಟ್ಟು, ಮನೆಗೂ ಬೆಂಕಿ ಪ್ರವೇಶಿಸಿದೆ. ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿ ಮತ್ತಷ್ಟು ಬೆಂಕಿಯ ತೀವ್ರತೆ ಹೆಚ್ಚಾದೆ. ನೋಡನೋಡುತ್ತಿದ್ದಂತೆ ಮನೆ ಸುಟ್ಟು ಕರಕಲಾಗಿದೆ.

4. ರಸ್ತೆ ಗುಂಡಿ; DKShivakumar- Kiran Majumdar-Shaw ನಡುವೆ ನಿಲ್ಲದ ವಾಕ್ಸಮರ

ಬೆಂಗಳೂರು ನಗರದ ರಸ್ತೆಗುಂಡಿ, ಟ್ರಾಫಿಕ್ ದಟ್ಟಣೆ, ಕಸದ ಸಮಸ್ಯೆ ಬಗ್ಗೆ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರುಗಳ ಮಧ್ಯೆ ಮಾತಿನ ಚಕಮಕಿ ಮುಂದುವರಿದಿದೆ.

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜೂಂದಾರ್ ಶಾ ಅವರು ಮೂಲಭೂತಸೌಕರ್ಯಗಳ ಬಗ್ಗೆ ಮಾತನಾಡಿರುವುದಕ್ಕೆ ಡಿಸಿಎಂ ಆಕ್ಷೇಪ ವ್ಯಕ್ತಪಡಿಸಿ ಅವರಿಗೆ ವೈಯಕ್ತಿಕ ಅಜೆಂಡಾ ಇರಬೇಕು, ಬಿಜೆಪಿ ಆಡಳಿತಾವಧಿಯಲ್ಲಿ ಅವರು ಯಾಕೆ ಬಾಯಿ ತೆರೆಯಲಿಲ್ಲ. ಅವರೊಂದಿಗೆ ಇವರು ಕೆಲವು ವೈಯಕ್ತಿಕ ಅಜೆಂಡಾ ಹೊದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ತಿರುಗೇಟು ನೀಡಿರುವ ಉದ್ಯಮಿ ಕಿರಣ್ ಮಜೂಂದಾರ್ ಶಾ, ಡಿಕೆ ಶಿವಕುಮಾರ್​ ಮಾತು ಸತ್ಯವಲ್ಲ. ಪೈ ಮತ್ತು ನಾನು ಇಬ್ಬರೂ ಈ ಹಿಂದಿನಿಂದಲ್ಲೂ ಟೀಕಿಸುತ್ತಾ ಬಂದಿದ್ದೇವೆ. ಈಗಲೂ ಹೇಳುತ್ತಿದ್ದೇವೆ, ಇದರಲ್ಲಿ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com