
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಮಹಿಳೆಯರು ನಿರ್ಜಲೀಕರಣದಿಂದ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಪುತ್ತೂರು ನಗರದಲ್ಲಿ ಶಾಸಕ ಅಶೋಕ್ ರೈ ಅವರು 'ಅಶೋಕ ಜನಮನ -2025' ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಭಾಗಿಯಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಆಮ್ಲಜನಕ ಕೊರತೆಯಿಂದ ಕೆಲವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಸಿಎಂ ಕಾರ್ಯಕ್ರಮವಾಗಿದ್ದರಿಂದ ಪೊಲೀಸ್ ಪ್ರೊಟೋಕಾಲ್ ಪ್ರಕಾರ ನೀರಿನ ಬಾಟಲಿಗಳನ್ನು ವಿತರಣೆ ಮಾಡಿರಲಿಲ್ಲ. ಆದ್ದರಿಂದ, ಬಿಸಿಲಿನ ಧಗೆಗೆ ಜನರು ಕುಡಿಯಲು ನೀರೂ ಸಿಗದೇ ನಿರ್ಜಲೀಕರಣದಿಂದ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಆಹಾರ ಮತ್ತು ಉಡುಗೊರೆಗಳನ್ನು ವಿತರಿಸುವಲ್ಲಿ ವಿಳಂಬವಾದ ನಂತರ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನಸಂದಣಿ ಮತ್ತು ಬಿಸಿಲಿನ ತಾಪದಿಂದ ಮಹಿಳೆಯರು ಹೈಪೊಗ್ಲೈಸೀಮಿಯಾ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಜನರು ಕಾರ್ಯಕ್ರಮಕ್ಕೆ ಬಂದಿದ್ದು, ಕೆಸರು ತುಂಬಿದ್ದ ಮೈದಾನದಲ್ಲಿ ಅವ್ಯವಸ್ಥೆಯಾಗಿತ್ತು. ಅಸ್ವಸ್ಥರಾದವರಿಗೆ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಂತರ ಆಯೋಜಕರು ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಮುಂದೆ ಇಂತಹ ಕಾರ್ಯಕ್ರಮಗಳಲ್ಲಿ ಯಾವುದೇ ಲೋಪಗಳು ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement