
ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿ, ಕಸದ ವಿಲೇವಾರಿ ಸಮಸ್ಯೆ, ಮೂಲಭೂತ ಸೌಕರ್ಯ ಕೊರತೆ ಬಗ್ಗೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ತೀವ್ರ ಟೀಕೆ ಮಾಡಿ ಎಚ್ಚರಿಸಿದ್ದರು.
ಇದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಆದಿಯಾಗಿ ಕೆಲವು ಸಚಿವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಕಿರಣ್ ಮಜುಂದಾರ್ ಶಾ ಅವರ ಟೀಕೆ ವೈಯಕ್ತಿಕ ಅಜೆಂಡಾದಿಂದ ಕೂಡಿದೆ, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅವರೇಕೆ ಪ್ರಶ್ನೆ ಮಾಡಿರಲಿಲ್ಲ, ಬಾಯಿ ಬಂದ್ ಮಾಡಿ ಏಕೆ ಕೂತಿದ್ದರು ಎಂದು ಡಿ ಕೆ ಶಿವಕುಮಾರ್ ಕೇಳಿದ್ದರು.
ಇಂದು ಸಿಎಂ-ಡಿಸಿಎಂ ಭೇಟಿ
ಅದಕ್ಕೆ ಸರಿಯಾಗಿ ತಿರುಗೇಟು ನೀಡುದ್ದ ಕಿರಣ್ ಮಜುಂದಾರ್ ಶಾ, ನನಗೇನು ಇದರಲ್ಲಿ ವೈಯಕ್ತಿಕ ಅಜೆಂಡಾ ಇಲ್ಲ, ಈ ಹಿಂದಿನ ಸರ್ಕಾರವನ್ನು ಕೂಡ ಟೀಕೆ ಮಾಡಿದ್ದೆ, ಸರ್ಕಾರದ ಲೋಪದೋಷವನ್ನು ಎತ್ತಿ ತೋರಿಸಿ ಜನತೆಗೆ ಉಪಯೋಗವಾಗುವ ಕೆಲಸ ಮಾಡುವುದೇ ನಮ್ಮ ಅಜೆಂಡಾ ಎಂದಿದ್ದರು. ಬೆಂಗಳೂರಿನ 10-15 ರಸ್ತೆಗಳನ್ನು ನಾವು ದುರಸ್ತಿ ಮಾಡುತ್ತೇವೆ ಎಂದು ಕೂಡ ಶಾ ಹೇಳಿದ್ದರು.
ಇದಾದ ಬಳಿಕ ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕಿರಣ್ ಮಜುಂದಾರ್ ಶಾ ಬೆಂಗಳೂರಿನಲ್ಲಿ ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿ ಸಿಹಿತಿಂಡಿ ವಿತರಿಸಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ರಸ್ತೆಗುಂಡಿ ದುರಸ್ತಿ, ಮೂಲಸೌಕರ್ಯ ಹೆಚ್ಚಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Advertisement