
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ಎಸ್ ಐಟಿ ತನಿಖೆ ಮುಂದುವರೆಸಬೇಕು ಎಂದು ಮಹಿಳಾ ಹೋರಾಟಗಾರರು, ಲೇಖಕಿಯರ ನಿಯೋಗವೊಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಹಿಳಾ ನಿಯೋಗ, ಧರ್ಮಸ್ಥಳ ಪ್ರಕರಣಗಳಲ್ಲಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ ಕೋರ್ಟ್ ಹೇಳಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.
ಎಸ್ ಐಟಿ ತನಿಖೆಯನ್ನು ಸಮಗ್ರವಾಗಿ ನಡೆಸಬೇಕು. ತಾರ್ಕಿಕ ಅಂತ್ಯದವರೆಗೂ ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿತು.
ಮಹಿಳೆಯರು ಹಾಗೂ ಸಮಾನ ಮನಸ್ಕರು ಸೇರಿ ಕೊಂದವರು ಯಾರು ಆಂದೋಲನ ರಚಿಸಿದ್ದೇವೆ. ಧರ್ಮಸ್ಥಳ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಮಹಿಳೆಯರ ಪರವಾಗಿ ಆಂದೋಲನ ಧ್ವನಿ ಎತ್ತುತ್ತಿದೆ. ಸರ್ಕಾರ ನೊಂದವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಆಂದೋಲನದ ಪ್ರಮುಖರಾದ ಚಂಪಾವತಿ, ಮಧು ಭೂಷಣ್, ಶಕುನ್, ಮಾಯಾರಾವ್ ಮತ್ತಿತರರು ನಿಯೋಗದಲ್ಲಿದ್ದರು.
Advertisement