

ಡಿಸಿಎಂ ಡಿ.ಕೆ ಶಿವಕುಮಾರ್ ನಿನ್ನೆ ದೀಪಾವಳಿಯ ಬಲಿಪಾಡ್ಯಮಿ ದಿನ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಪತ್ನಿ ಜೊತೆಗೂಡಿ ಪಡೆದಿದ್ದಾರೆ. ರಾಯರ ಅನುಗ್ರಹಕ್ಕಾಗಿ ತುಲಾಭಾರ ನೆರವೇರಿಸಿದರು. ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಂಚಮುಖಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಮೂಲ ರಾಮ ದೇವರ ದರ್ಶನವನ್ನೂ ಮಾಡಿದ್ದಾರೆ.
ಮಂತ್ರಾಲಯದಲ್ಲಿ ತುಲಾಭಾರ ಸೇವೆ
ಗುರುರಾಯರ ದರ್ಶನ ಬಳಿಕ ಡಿಕೆ ಶಿವಕುಮಾರ್ ಅವರು ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಶ್ರೀಮಠದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಶ್ರೀಮಠದಿಂದ ಡಿಕೆಶಿ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶ್ರೀಗಳ ಭೇಟಿ ಬಳಿಕ ಮಾತನಾಡಿದ ಅವರು, ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು. ರಾಯರ ಅನುಗ್ರಹಕ್ಕಾಗಿ ಬಹಳ ದಿನಗಳಿಂದ ಬರಬೇಕೆಂದು ಇದ್ದೆ. ಗುರುಗಳ ಅನುಗ್ರಹ ಎಲ್ಲಕ್ಕೂ ಅವಶ್ಯಕ. ಇಂದು ವಿಶೇಷ ದಿನವಾಗಿದ್ದು, ಶ್ರೀಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಭಾಗಿಯಾದೆ. ಕಳೆದ ಬಾರಿ ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ. ಎಲ್ಲರಿಗೆ, ನಾಡಿಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡಿದ್ದೇನೆ ಎಂದರು.
ಪಂಚಮುಖಿ ದರ್ಶನದ ಬಳಿಕ ಮಂತ್ರಾಲಯಕ್ಕೆ ಮರಳಿದ ಡಿಕೆಶಿ ತುಲಾಭಾರ ನೆರವೇರಿಸಿದರು. ರಾಯರ ಅನುಗ್ರಹಕ್ಕಾಗಿ ಬೆಲ್ಲದ ಮೂಟೆಯನ್ನಿಟ್ಟು ಮಠದ ಅರ್ಚಕರಿಂದ ಡಿ.ಕೆ.ಶಿವಕುಮಾರ್ ಅವರಿಗೆ ತುಲಾಭಾರ ಮಾಡಲಾಯಿತು. ಬಳಿಕ ಮಂತ್ರಾಲಯದಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯುವ ಧಾರ್ಮಿಕ ಕಾರ್ಯಕ್ರಮ ಮೂಲ ರಾಮದೇವರ ಪೂಜೆಯಲ್ಲಿ ಭಾಗಿಯಾಗಿದ್ದರು. ದೀಪಾವಳಿ ಬಲಿಪಾಡ್ಯ ಹಿನ್ನೆಲೆ ಮೂಲರಾಮ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿದರು.
‘ಆಂಜನೇಯ ಸ್ವಾಮಿ ಸಮಾಜ ಸೇವಕ, ಆಂಜನೇಯ ಸ್ವಾಮಿ ಸಮಾಜದ ತ್ಯಾಗಿ’ ಎಂದು ಮಂತ್ರಾಲಯದಲ್ಲಿ ಡಿಕೆ ಶಿವಕುಮಾರ್ ಮಾತುಗಳನ್ನಾಡಿದ್ದಾರೆ. ಯಾರು ತ್ಯಾಗ ಮಾಡ್ತಾರೆ, ಅವರನ್ನು ಗುರುತಿಸುತ್ತಾರೆ ಎನ್ನುವುದಕ್ಕೆ ಆಂಜನೇಯ ಸ್ವಾಮಿಯೇ ಸಾಕ್ಷಿ.
ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದರಲ್ಲಿ ಕಾಂಗ್ರೆಸ್ ಗೆ ನಂಬಿಕೆ
ಜನರ ಜೊತೆ ನಿಷ್ಪಕ್ಷಪಾತವಾಗಿ ಸೇವಾ ಮನೋಭಾವದಿಂದ ಇದ್ದಾಗ, ಸಮಾಜ ನಮ್ಮನ್ನು ಗುರುತಿಸುತ್ತದೆ. ವ್ಯಕ್ತಿ ಪೂಜೆ ಮಾಡಬಾರದು, ಪಕ್ಷ ಪೂಜೆ ಮಾಡಬೇಕು. ಕಾಂಗ್ರೆಸ್ ಪಕ್ಷ ಇದ್ರೆ ನಾವೆಲ್ಲ. ಗುಂಪು ರಾಜಕಾರಣ ಮಾಡಲು ನಾನು ಅವಕಾಶ ಕೊಟ್ಟಿಲ್ಲ. ಬೋಸರಾಜು ಶಾಸಕ ಅಲ್ಲದೇ ಇದ್ರೂ ಯಾಕೆ ಅವರನ್ನು ಮಂತ್ರಿ ಮಾಡಿದರು ಹಗಲು ರಾತ್ರಿ ಅವರು ಪಕ್ಷದ ಕೆಲಸ ಮಾಡಿದ್ದಾರೆ ಎಂದು ಪಕ್ಷ ಅವರನ್ನು ಮಂತ್ರಿ ಮಾಡಲಾಗಿದೆ.
ನಮ್ಮ ಸರ್ಕಾರ ಬಂದಮೇಲೆ ಯಡಿಯೂರಪ್ಪನವರು, ಒಂದು ಕಾಳು ಅಕ್ಕಿ ಕಡಿಮೆ ಕೊಟ್ರೂ ನಾವು ಒಪ್ಪಲ್ಲ ಎಂದು ಹೇಳಿದರು. ಮೋದಿ ಹೇಳಿದ್ರು ಸರ್ಕಾರ ದಿವಾಳಿ ಆಗುತ್ತೆ ಎಂದು. ಆದರೆ ಮೊನ್ನೆ ಬಿಜೆಪಿ ಅವರು ಬಿಹಾರದಲ್ಲಿ ಒಮ್ಮೆಲೆ 10 ಸಾವಿರ ಹಣ ಕೊಡ್ತಿದ್ದಾರೆ. ನಮ್ಮ ಮಾದರಿ ಬಿಜೆಪಿ ಅನುಸರಿಸ್ತಿದಾರೆ, ನಮ್ಮ ಗ್ಯಾರೆಂಟಿ ಮಾದರಿ ಯೋಜನೆಗಳನ್ನು ಅವರು ಕಾಪಿ ಮಾಡುತ್ತಿದ್ದಾರೆ ಎಂದರು.
ಜಾತ್ಯಾತೀತ ತತ್ವದ ಮೇಲೆ ನಾವು ಬದುಕಬೇಕು. ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದರು. ಅವರು ಯಾತ್ರೆ ಮಾಡಿದ ಎಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ. ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿಲ್ಲ ಎಂದರು.
ಡಿಕೆಶಿ ಸಿಎಂ ಆಗಿಯೇ ಆಗುತ್ತಾರೆ
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಕಲ್ಪ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗೇ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
Advertisement