

ಮೈಸೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ರೈಲ್ವೆ ಸಂರಕ್ಷಣಾ ಪಡೆಯು (RPF) ತ್ವರಿತ ಹಾಗೂ ಸಂಘಟಿತ ಕಾರ್ಯಾಚರಣೆಯ ಮೂಲಕ ಕಿಡ್ನಾಪ್ ಆದ 30 ನಿಮಿಷಗಳಲ್ಲಿಯೇ ಅಪಹರಣಕಾರರಿಂದ ಮಗುವನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದೆ.
ಇಂದು ಬೆಳಗಿನ ಜಾವ 5:20ರ ಸುಮಾರಿಗೆ ಕಾನ್ಸ್ ಟೇಬಲ್ ಸಿ.ಎಂ. ನಾಗರಾಜು ಅವರು ಮೈಸೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಮಗು ನಾಪತ್ತೆಯಾದ ಬಗ್ಗೆ ತಿಳಿಸಿ ಅಳುತ್ತಿದ್ದ ಮಹಿಳೆಯನ್ನು ಗಮನಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಅವರು, ಈ ವಿಷಯವನ್ನು ಎಎಸ್ಐ ಪ್ರಾಸಿ ಮತ್ತು ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಅವರಿಗೆ ತಿಳಿಸುವುದರೊಂದಿಗೆ ಸಿಸಿಟಿವಿ (CCTV) ಹುಡುಕಾಟ ಆರಂಭಿಸಿದಾಗ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಪ್ಲಾಟ್’ಫಾರ್ಮ್ ನಂ. 6 ರ ಮೂಲಕ ರೈಲು ಸಂಖ್ಯೆ 16206 ಅನ್ನು ಹತ್ತಲು ಹೋಗುವುದು ಕಂಡುಬಂದಿದೆ. ತದನಂತರ ಆರ್.ಪಿ.ಎಫ್ ತಂಡ 5:50 ರೊಳಗೆ ಆ ಮಹಿಳೆಯನ್ನು ತಡೆದು, ಮಗುವನ್ನು ರಕ್ಷಿಸಿ, ಆ ಮಗುವಿನ ಪೋಷಕರೊಂದಿಗೆ ಪುನಃ ಸೇರಿಸಿತು.
ಆರೋಪಿ ದೇವಿಕಾ (ಹೆಸರು ಬದಲಾಯಿಸಲಾಗಿದೆ) ಹಾಸನದ ನಿವಾಸಿಯಾಗಿದ್ದು, ಆಕೆಯನ್ನು GRP ರೈಲ್ವೆ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 137(b) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಾಪತ್ತೆಯಾದ ಅಥವಾ ಅಪಹರಣಕ್ಕೊಳಗಾದ ಮಕ್ಕಳನ್ನು ಪತ್ತೆಹಚ್ಚಿ ಅವರ ಕುಟುಂಬಗಳೊಂದಿಗೆ ಪುನಃ ಸೇರಿಸಲು ಮೀಸಲಾದ 'ಆಪರೇಷನ್ ನನ್ಹೆ ಫರಿಶ್ತೆ' ಕಾರ್ಯಕ್ರಮದಡಿ ಇದು ನಡೆದಿದ್ದು, ಆರ್.ಪಿ.ಎಫ್ ಸಿಬ್ಬಂದಿಯ ಜಾಗರೂಕತೆ, ತಂಡದ ಕಾರ್ಯ ಮತ್ತು ಸಿಸಿಟಿವಿ ಕಣ್ಗಾವಲು ಬಳಕೆಯ ಮಹತ್ವವನ್ನು ಎತ್ತಿ ತೋರಿಸಿದೆ.
ನೈಋತ್ಯ ರೈಲ್ವೆ ವಲಯದಾದ್ಯಂತ ಒಟ್ಟು 152 ರೈಲ್ವೆ ನಿಲ್ದಾಣಗಳಲ್ಲಿ 2,043 ಸಿಸಿಟಿವಿ ಕ್ಯಾಮೆರಾಗಳನ್ನು ನಿಲ್ದಾಣಗಳು, ಪ್ಲಾಟ್’ಫಾರ್ಮ್ ಗಳು ಮತ್ತು ಇತರ ನಿರ್ಣಾಯಕ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಇವುಗಳಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ 63 ನಿಲ್ದಾಣಗಳಲ್ಲಿ 859 ಕ್ಯಾಮೆರಾಗಳು, ಬೆಂಗಳೂರು ವಿಭಾಗದಲ್ಲಿ 27 ನಿಲ್ದಾಣಗಳಲ್ಲಿ 586 ಕ್ಯಾಮೆರಾಗಳು ಮತ್ತು ಮೈಸೂರು ವಿಭಾಗದಲ್ಲಿ 62 ನಿಲ್ದಾಣಗಳಲ್ಲಿ 598 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸುಧಾರಿತ ಕಣ್ಗಾವಲು ಜಾಲವು ತ್ವರಿತ ಪತ್ತೆ, ಅಪರಾಧ ತಡೆಗಟ್ಟುವಿಕೆ ಮತ್ತು ವೇಗದ ತುರ್ತು ಪ್ರತಿಕ್ರಿಯೆಗೆ ಅನುವು ಮಾಡಿಕೊಟ್ಟಿದೆ.
ಎಲ್ಲಾ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು, ನೈಋತ್ಯ ರೈಲ್ವೆ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ವಿಭಾಗದಲ್ಲಿ ಒಟ್ಟು 55 ಹೆಚ್ಚುವರಿ RPF/RPSF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚಿದ ಜಾಗರೂಕತೆಗಾಗಿ ಕೃಷ್ಣರಾಜಪುರಂ ಮತ್ತು ಎಸ್ಎಂವಿಟಿ ಬೆಂಗಳೂರಿನಲ್ಲಿ ಎರಡು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ನೈರುತ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
Advertisement