
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವ ವಿಷಯದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿ, ಆತನನ್ನು ಅಮಾವಾಸ್ಯೆ ಎಂದು ಕರೆಯುತ್ತೇನೆ ಎಂದು ಜರಿದಿದ್ದ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಟೀಕೆಗೆ ಸಂಸದ ತೇಜಸ್ವಿ ಸೂರ್ಯ ಅವರ ಖಡಕ್ ಪ್ರತಿಕ್ರಿಯೆ ನೀಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಸಿಎಂ ಟೀಕೆ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ ಸೂರ್ಯ, "ಅಮಾವಾಸ್ಯೆ ದಿನಾನೂ ಸೂರ್ಯ ಇರ್ತಾನೆ, ಹುಣ್ಣಿಮೆ ದಿನಾನೂ ಇರ್ತಾನೆ. ವರ್ಷದ 365 ದಿನ ಕೂಡಾ ಪ್ರಕಾಶಮಾನ ಆಗಿರೋದು ಯಾರಂದ್ರೆ ಸೂರ್ಯನೇ. ಅಮಾವಾಸ್ಯೆ ದಿನ ಇಲ್ಲದೇ ಇರೋದು ಅಂದರೆ ಅದು ಚಂದ್ರ. ಬಹುಷಃ ನಿಮಗೆ ಈ ಚಂದ್ರನನ್ನು ನೋಡಿ ಪ್ರಾರ್ಥಿಸುವವರ ಸಹವಾಸದಿಂದಾಗಿ ಸೂರ್ಯ-ಚಂದ್ರರ ನಡುವಿವ ವ್ಯತ್ಯಾಸವೇ ಗೊತ್ತಾಗದಂತಾಗಿದೆ. ಅಮಾವಾಸ್ಯೆಯ ದಿನ ಸೂರ್ಯ ಇರುವುದಿಲ್ಲ ಎಂದು ಗೊಂದಲಕ್ಕೆ ಒಳಗಾಗಿದ್ದೀರಿ. ಚಂದ್ರ ಯಾವತ್ತಿರ್ತಾನೆ, ಯಾವತ್ತು ಇರಲ್ಲ? ಪೂರ್ತಿ ಚಂದ್ರ ಇದಾನೋ, ಅರ್ಧ ಚಂದ್ರ ಇದಾನೋ, ಯಾವ ಊರಲ್ಲಿ ಚಂದ್ರ ಕಾಣಿಸಿದ್ರೆ ಯಾವಾಗ ಪ್ರಾರ್ಥನೆ ಮಾಡಬೇಕು ಎಂಬ ಆಧಾರದಲ್ಲಿ ನಾವು ಪೂಜೆ ಮಾಡುವುದಿಲ್ಲ, ಅಮಾವಾಸ್ಯೆಯ ದಿನ ಸೂರ್ಯ ಇರುತ್ತಾನೆ, ನಾವು ಅಮಾವಾಸ್ಯೆಯ ದಿನದಂದೂ ಪೂಜೆ ಮಾಡುತ್ತೇವೆ, ಹುಣ್ಣಿಮೆ ದಿನದಂದೂ ಪೂಜೆ ಮಾಡುತ್ತೇವೆ" ಎಂದು ತೇಜಸ್ವಿ ಸೂರ್ಯ ಸಿಎಂ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಹಿರಿಯರಿದ್ದಾರೆ. ಲೋಕಾನುಭವ ಇರುವವರು ಇದ್ದಾರೆ. ಆದರೆ ಅವರಿಗೆ ಬಹುಷಃ ಅಮಾವಾಸ್ಯೆಗೂ- ಹುಣ್ಣಿಮೆಗೂ ಇರುವ ವ್ಯತ್ಯಾಸನೇ ಗೊತ್ತಿಲ್ವೇನೋ. ಹೊರಗಡೆ ಹೋಗಿ ನೋಡೋದೆ ಇಲ್ವೇನೋ ಎಂದು ಭಾಸ ಆಗುತ್ತೆ. ಸೂರ್ಯನನ್ನು ಪೂಜಿಸುವವರಿಗೂ ಚಂದ್ರನನ್ನು ಪೂಜಿಸುವವರಿಗೂ ಇರುವ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಿ. ಸೂರ್ಯ ಅಮಾವಾಸ್ಯೆ- ಹುಣ್ಣಿಮೆ ಎಲ್ಲಾ ದಿನವೂ ಪ್ರಕಾಶಮಾನವಾಗಿರ್ತಾನೆ ಅನ್ನುವ ಬೇಸಿಕ್ ಅರ್ಥ ಮಾಡ್ಕೊಳಿ ಎಂದು ಮನವಿ ಮಾಡ್ತೇನೆ" ಎಂದು ತಿರುಗೇಟು ನೀಡಿದ್ದಾರೆ.
Advertisement