

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ನಲ್ಲಿ ಕ್ರಾಂತಿಯಾಗುತ್ತದೆ, ಅಧಿಕಾರ ಹಂಚಿಕೆಯಾಗುತ್ತದೆ, ಸಂಪುಟ ಪುನಾರಚನೆಯಾಗಲಿದೆ ಇತ್ಯಾದಿ ವಿಚಾರಗಳು ತೀವ್ರ ಚರ್ಚೆಯಲ್ಲಿರುವಾಗ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶಗಳನ್ನು ಪಕ್ಷ ನೀಡಿದೆ. ನನ್ನನ್ನು ಗುರುತಿಸಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ. ಸಚಿವ ಸ್ಥಾನದ ತ್ಯಾಗಕ್ಕೆ ಸಿದ್ದ ಎಂದಿದ್ದಾರೆ.
ಸಿಎಂ ಡಿನ್ನರ್ ಮೀಟ್
ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದರು. ಸಂಪುಟ ಪುನಾರಚನೆ ಸಂಬಂಧ ಚರ್ಚೆಗಾಗಿಯೇ ಈ ಔತಣಕೂಟ ಏರ್ಪಟ್ಟಿತ್ತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಈ ಚರ್ಚೆಯನ್ನು ಮುಖ್ಯಮಂತ್ರಿಗಳು ಹಾಗೂ ಇತರ ಕಾಂಗ್ರೆಸ್ ನಾಯಕರು ನಿರಾಕರಿಸಿದ್ದರು.
26 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ
ಈ ಬಾರಿ 26 ಲಕ್ಷ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ ಎಂದು ಹಾಸನ ಜಿಲ್ಲೆ ಉಸ್ತುವಾರಿ ಸಚಿವರೂ ಕೂಡ ಆಗಿರುವ ಕೃಷ್ಣ ಭೈರೇಗೌಡ ಹೇಳಿದರು. ಹಾಸನಾಂಬ ದೇವಿ ಅಂದರೆ ಹಸನ್ಮುಖಿ, ಪ್ರಸನ್ನತೆಯ ಸಂಕೇತ. ದೇವಿಯ ದರ್ಶನ ಪಡೆದ ಭಕ್ತರು ಸಂತೋಷದಿಂದ ಹೋಗಿದ್ದಾರೆ. ದರ್ಶನ ಪಡೆದ 26 ಲಕ್ಷ ಭಕ್ತರ ಪೈಕಿ ಶೇ 60ರಷ್ಟು ಮಹಿಳೆಯರು ಎಂದು ತಿಳಿಸಿದರು.
Advertisement