

ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಪರಿಶೀಲನೆ ನಡೆಸಿದೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರಿನ ಶ್ರೀರಾಂಪುರ ವ್ಯಾಪ್ತಿಯಲ್ಲಿರುವ ಆರೋಪಿ ಅರ್ಚಕ ಪೋಟಿ ಉನ್ನಿಕೃಷ್ಣನ್ ನಿವಾಸ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರ್ಸ್ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲಿಸಿದ್ದಾರೆ.
ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್ ಕದ್ದ ಆರೋಪದಡಿ ಪೋಟಿ ಉನ್ನಿಕೃಷ್ಣನ್ ಅವರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದರು. ಕದ್ದ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಅವರಿಗೆ ಮಾರಾಟ ಮಾಡಿದ ಆರೋಪದಡಿ ದಾಳಿ ಮುಂದುವರೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.
ಉದ್ಯಮಿ ಗೋವರ್ಧನ್ ಅವರ ಒಡೆತನದ ರೊದ್ದಂ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ ಹಲವಾರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ. 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಗೋವರ್ಧನ್ ಒಪ್ಪಿಕೊಂಡಿದ್ದಾರೆ.
ಶಬರಿಮಲೆಯಲ್ಲಿ ಕಳ್ಳತನ ಆದ ಚಿನ್ನ ಎನ್ನುವುದು ಗೊತ್ತಿರದ ಕಾರಣ ನಾನು ಚಿನ್ನ ಖರೀದಿ ಮಾಡಿದ್ದೆ. ಕದ್ದಿದ್ದ ಚಿನ್ನ ಎಂದು ಗೊತ್ತಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಗೋವರ್ಧನ್ ಕೇರಳ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ. ಇದನ್ನು ಕೇಳಿದ ಅಧಿಕಾರಿಗಳು ಮುಂದೇನಾದರೂ ಅಗತ್ಯವಿದ್ದರೆ ತನಿಖೆಗೆ ಕರೆದಾಗ ಬರಬೇಕಾಗುತ್ತದೆ ಎಂದು ಹೇಳಿ ಹೊರಟಿದ್ದಾರೆ ಎನ್ನಲಾಗಿದೆ.
Advertisement