

ಬೆಳಗಾವಿ: ನವೆಂಬರ್ ನಂತರ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಮಾತಿಗೆ ಧ್ವನಿಗೂಡಿಸಿದ್ದಾರೆ.
ನವೆಂಬರ್ ನಂತರ ತಮ್ಮ ಸರ್ಕಾರ ಅರ್ಧ ಅವಧಿ ಪೂರ್ಣಗೊಳಿಸಿದ ನಂತರ ಸಂಪುಟ ವಿಸ್ತರಣೆಯ ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕಾಂಗ್ರೆಸ್ ಹೈಕಮಾಂಡ್ ನಾಲ್ಕು ತಿಂಗಳ ಹಿಂದೆಯೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿತ್ತು ಆದರೆ ತಮ್ಮ ಸರ್ಕಾರ ಎರಡೂವರೆ ವರ್ಷ ಪೂರೈಸಿದ ನಂತರ ಆ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದ ನಂತರ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿ ಅವರ ಮಾರ್ಗದರ್ಶನದಂತೆ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನವೆಂಬರ್ 16 ರಂದು ನವದೆಹಲಿಗೆ ಭೇಟಿ ನಿಗದಿಯಾಗಿದೆ. ಪಕ್ಷದ ಮಾಜಿ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಬರೆದ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳುತ್ತಿದ್ದೇನೆ.
ಈ ಭೇಟಿಯ ವೇಳೆ ಪಕ್ಷದ ಹೈಕಮಾಂಡ್‌ನನ್ನೂ ಭೇಟಿ ಮಾಡಲಿದ್ದೇನೆ.ರಾಜ್ಯದ ಆಡಳಿತ ಹಾಗೂ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದು ನಮ್ಮ ಕರ್ತವ್ಯ ಎಂದರು.
ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
Advertisement