

ಬೆಂಗಳೂರು: ದೇಶದ ಜನತೆ ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಭ್ರಷ್ಟಾಚಾರವನ್ನು ಎದುರಿಸಿರುತ್ತಾರೆ ಅಂತಹ ಪರಿಸ್ಥಿತಿ ಇಂದು ದೇಶದಲ್ಲಿ ಉಂಟಾಗಿದೆ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಮೌರ್ಯ ಹೊಟೇಲ್ ನಲ್ಲಿ ನಡೆದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾದ ಬೆಂಗಳೂರು ನಗರ/ ಗ್ರಾಮಾಂತರ ಜಿಲ್ಲೆ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ನಿಶ್ಚಲಾನಂದನಾಥ ಶ್ರೀಗಳು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವ ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ಸಿಗುವಂತೆ ಮಾಡಿದರು. ಈಗ ನಾವು ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ.
ಅಂದು ಸ್ವಾತಂತ್ರ್ಯ ಹೋರಾಟಗಾರರು, ಈಸ್ಟ್ ಇಂಡಿಯಾ ಕಂಪನಿ, ಡಚ್ ಕಂಪನಿ, ಫ್ರಾನ್ಸ್ ವಿರುದ್ಧ ಹೋರಾಟ ನಡೆಸಿದ್ದರು. ಇಂದು ನಮ್ಮ ಸುತ್ತ ಇರುವ ಭ್ರಷ್ಟಾಚಾರ ಮನೋಭಾವನೆ ಇರುವಂತಹ, ಭ್ರಷ್ಟಾಚಾರವನ್ನೇ ಸತ್ಯ ಎಂದು ಒಪ್ಪಿರುವ ಜನರ ವಿರುದ್ಧ ಹೋರಾಡಬೇಕಿದೆ, ಈ ನಿಟ್ಟಿನಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
ಖಾತೆ/ ಪೌತಿ ಖಾತೆ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಭ್ರಷ್ಟಾಚಾರ ಎಂಬುದು ಸ್ಥಳೀಯ ಗ್ರಾಮಪಂಚಾಯತ್ ನಿಂದ ರಾಷ್ಟ್ರೀಯ ಹಂತದವರೆಗೂ ವ್ಯಾಪಿಸಿದೆ. ತಿಳಿದೂ ತಿಳಿದೂ ಭಾರತದ ಸುಶಿಕ್ಷಿತ ಸಮಾಜ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದ್ದೇವೆ. ಕೆಲಸ ಆದರೆ ಸಾಕು ಹಣ ಹೋದರೂ ಪರವಾಗಿಲ್ಲ ಎಂಬ ಮನಸ್ಥಿತಿ ಬಂದಿದೆ. ಧೈರ್ಯವಾಗಿ ಮುಂದೆ ನಿಂತು ಹೋರಾಟ ಮಾಡುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಈ ಮನೋಭಾವ ಭಾರತೀಯರಲ್ಲಿ ಬೇರೂರಿದ್ದು. ಭ್ರಷ್ಟಾಚಾರ ಕ್ಯಾನ್ಸರ್ ರೀತಿ ಹರಡುತ್ತಿದೆ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ತೊಲಗಿಸುವ ಉಸಾಬರಿ ನಮಗೇಕೆ ಬೇಕು ಎಂದು ನಿರ್ಲಕ್ಷ್ಯ ಮಾಡಬಾರದು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಗುಂಡಿಗೆ ಇರಬೇಕು, ನಮ್ಮ ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಡಬೇಕು ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕರಾದ ಡಾ.ರಾಜೇಶ್ ಶುಕ್ಲಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾದ ಶಿವಕುಮಾರ್, ರಾಜ್ಯಾಧ್ಯಕ್ಷರಾದ ಡಾ.ರಾಘವೇಂದ್ರ ಎಸ್ಆರ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement