ಹೈಕೋರ್ಟ್ ಸ್ಥಳಾಂತರ ಬೇಡಿಕೆ ಬಗ್ಗೆ ಪರಿಶೀಲನೆ; ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ ಅನುದಾನ: ಡಿ.ಕೆ ಶಿವಕುಮಾರ್

ಹೈಕೋರ್ಟ್ ಅನ್ನು ನಗರದ ಹೊರಗೆ ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಕ್ಷಿದಾರರು, ಲಾಯರ್ ಗಳಿಗೆ ಅನುಕೂಲವಾಗುವಂತಹ ಸ್ಥಳ ನೋಡಬೇಕಿದೆ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳು. ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಕಬ್ಬನ್ ಪಾರ್ಕ್ ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಹವಾಲು ಸ್ವೀಕರಿಸಿ ಮಾತನಾಡಿದರು.

ಕಬ್ಬನ್ ಉದ್ಯಾನವನದ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಮಿಕ್ಕ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಉದ್ಯಾನದ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಇವುಗಳ ರಕ್ಷಣೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.

ಉದ್ಯಾನದಲ್ಲಿ ಸರ್ಕಾರದ ವತಿಯಿಂದಲೇ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಆಲೋಚನೆ ಮಾಡಲಾಗುವುದು. ನಾನು ನೋಡಿದಂತೆ ಕಬ್ಬನ್ ಪಾರ್ಕ್ ಅನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ನಾನು ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿಯನ್ನ ಕಬ್ಬನ್‌ ಪಾರ್ಕ್ ತೋರಿಸಲು ಕರೆದುಕೊಂಡು ಬಂದಿದ್ದೆ. ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಇಲ್ಲಿಗೆ ಬಂದು ಸಮಯ ಕಳೆಯುತ್ತಿದ್ದೆವು ಎಂದರು.

ಅರಣ್ಯ ಇಲಾಖೆಯ ಜೊತೆ ಚರ್ಚೆ ಮಾಡಿ ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳಲ್ಲಿ ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಮಾದರಿಯಲ್ಲಿ ಉದ್ಯಾನಗಳ ಅಭಿವೃದ್ಧಿ ಮಾಡಿ, 'ಟ್ರೀ ಪಾರ್ಕ್' ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇದರಿಂದ ಕಾಡಿನ ಸಂರಕ್ಷಣೆಯೂ ಆದಂತೆ ಆಗುತ್ತದೆ. ಲಾಲ್ ಬಾಗ್ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂಪಾಯಿ ಘೋಷಣೆ ಮಾಡಿದ್ದೇನೆ ಎಂದರು.

DK Shivakumar
ಸುರಂಗ ರಸ್ತೆ ಕಾಮಗಾರಿ ನಂತರ ಲಾಲ್‌ಬಾಗ್ ಭೂಮಿ ವಾಪಸ್: DCM ಡಿ.ಕೆ ಶಿವಕುಮಾರ್

ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಹೈಕೋರ್ಟ್ ಸ್ಥಳಾಂತರಕ್ಕೆ 15- 20 ಎಕರೆ ಜಾಗ ನೀಡಿ ಎಂದು ವಕೀಲರು, ಮುಖ್ಯ ನ್ಯಾಯಮೂರ್ತಿಗಳು ಮನವಿ ಮಾಡಿದ್ದರು. ಸರ್ಕಾರದ ಮುಂದೆಯೂ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹತ್ತಿರದಲ್ಲಿ ಎಲ್ಲಿ ಸ್ಥಳಾವಕಾಶ ದೊರೆಯಬಹುದು ಎಂದು ಪರಿಶೀಲನೆ ಮಾಡಲಾಗುವುದು. ಹಳೆಯ ಐತಿಹಾಸಿಕ ಕಟ್ಟಡವಾದ ಕಾರಣಕ್ಕೆ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸ್ಥಳವಾಕಾಶ ಚಿಕ್ಕದಿದೆ ಎಂದರು.

ಹೈಕೋರ್ಟ್ ಅನ್ನು ನಗರದ ಹೊರಗೆ ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಕ್ಷಿದಾರರು, ಲಾಯರ್ ಗಳಿಗೆ ಅನುಕೂಲವಾಗುವಂತಹ ಸ್ಥಳ ನೋಡಬೇಕಿದೆ. ಒಂದಷ್ಟು ಜನ ವಕೀಲರು ಭೇಟಿ ಮಾಡಿ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ತಿಳಿಸಿದರು. ಒಂದಷ್ಟು ಕಾನೂನಾತ್ಮಕ ತೊಡಕುಗಳು ಇರುವ ಕಾರಣಕ್ಕೆ ಆನಂತರ ಅದರ ಬಗ್ಗೆ ಆಲೋಚನೆ ಮಾಡೋಣ ಎಂದು ತಿಳಿಸಿದ್ದೇನೆ ಎಂದರು.

ಈ ಮೊದಲು ಎಲ್ಲಾ ಹೋರಾಟಗಳು, ಪ್ರತಿಭಟನೆಗಳು ಕಬ್ಬನ್ ಪಾರ್ಕ್ ಅಲ್ಲಿಯೇ ನಡೆಯುತ್ತಿತ್ತು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಇದನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಯಿತು. ನಗರದ ಶ್ವಾಸಕೋಶದಂತೆ ಇರುವ ಈ ಉದ್ಯಾನ ಉಳಿಸಿಕೊಳ್ಳಲು ಏನು ಮಾಡಬೇಕೊ ಅದನ್ನು ನಾನು ಮಾಡುತ್ತೇನೆ.

ಎಷ್ಟು ಗಂಟೆಗೆ ಯಾರು ಒಳ ಬಂದರು ಹೊರ ಹೋದರು ಎಂಬುದನ್ನು ದಾಖಲು ಮಾಡಲು ಕಬ್ಬನ್ ಪಾರ್ಕ್ ನಲ್ಲಿ ಹೈಟೆಕ್ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಬೇಕು. ಆಯುಕ್ತರ ಕಚೇರಿಯಲ್ಲಿಯೂ ಸಹ ಇದರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇ‌‌ನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com