

ಬೆಂಗಳೂರು: ಬೆಂಗಳೂರಿನ ಇ-ಮೊಬಿಲಿಟಿ ಜಾಲದಲ್ಲಿ "ಸುರಕ್ಷತಾ ಲೋಪಗಳು" ಮತ್ತು "ಕಳಪೆ ಸೇವಾ ಮಾನದಂಡಗಳು" ಇವೆ ಎಂದು ಉಲ್ಲೇಖಿಸಿ, 'ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್(ಜಿಸಿಸಿ) ಮಾದರಿಯಡಿಯಲ್ಲಿ ವಿದ್ಯುತ್ ಬಸ್‌ಗಳನ್ನು ಓಡಿಸುವ ಕಂಪನಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅಕ್ಟೋಬರ್ 25 ರಂದು ಬರೆದ ಪತ್ರದಲ್ಲಿ, ಫೇಮ್ II(ಭಾರತದಲ್ಲಿ ವಿದ್ಯುತ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ) ಯೋಜನೆ ಅಡಿಯಲ್ಲಿ ಸಿಇಎಸ್ಎಲ್ (ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್), ಸ್ಮಾರ್ಟ್ ಸಿಟಿ ಯೋಜನೆ ಮತ್ತು 2023-24 ರ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಮುಂತಾದ ಯೋಜನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಜಿಸಿಸಿ ಕಂಪನಿಗಳ ಕಾರ್ಯಕ್ಷಮತೆಯ ಬಗ್ಗೆ ರಾಮಲಿಂಗಾರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ 'ಫೇಮ್'(FAME) ಯೋಜನೆಯಡಿ, ಬಿಎಂಟಿಸಿ ಸುಮಾರು 1,700 ಇವಿ ಬಸ್ಸುಗಳನ್ನು ಪಡೆದಿದೆ. ಈ ಒಪ್ಪಂದದ ಪ್ರಕಾರ, ಬಸ್ಸಿನ ನಿರ್ವಹಣೆ ಮತ್ತು ಚಾಲಕರ ಜವಾಬ್ದಾರಿಯನ್ನು ಪೂರೈಕೆದಾರ ಕಂಪನಿಯೇ ಹೊರಬೇಕು. ಸಾರಿಗೆ ನಿಗಮವು ಕೇವಲ ನಿರ್ವಾಹಕರನ್ನು ಒದಗಿಸಿ, ಪ್ರತಿ ಕಿಲೋಮೀಟರ್‌ಗೆ ನಿಗದಿತ ಮೊತ್ತವನ್ನು ಪಾವತಿಸುತ್ತದೆ. ಆದರೆ, ಈ ಕಂಪನಿಗಳು ಒಪ್ಪಂದದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸಾರಿಗೆ ಸಚಿವರು ಆರೋಪಿದ್ದಾರೆ.
"ಇವಿ ಬಸ್ಗಳ ಕಳಪೆ ನಿರ್ವಹಣೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ, ಬಸ್ಗಳ ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸುವಂತೆ ಮತ್ತು ಪೂರೈಕೆದಾರ ಕಂಪನಿಗಳು ಒಪ್ಪಂದವನ್ನು ಪಾಲಿಸುವಂತೆ ಮಾಡಲು ಮಧ್ಯಪ್ರವೇಶಿಸಬೇಕೆಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ ಮತ್ತು ಶೀಘ್ರದಲ್ಲೇ ಅವರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸುತ್ತೇನೆ," ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರಚನಾತ್ಮಕ ಚಾಲಕರ ತರಬೇತಿ ಕೊರತೆ, ಕಳಪೆ ನಿರ್ವಹಣೆ, ಆಗಾಗ್ಗೆ ರದ್ದತಿ, ಸ್ಥಗಿತಗಳು, ಬ್ಯಾಟರಿ ಸಂಬಂಧಿತ ಸಮಸ್ಯೆಗಳು ಮತ್ತು ಸಾಕಷ್ಟು ಸಿದ್ಧತೆ ಇಲ್ಲದಿರುವುದು ಅಪಘಾತಗಳ ಹೆಚ್ಚಳ ಮತ್ತು ಪುನರಾವರ್ತಿತ ಹಠಾತ್ ಮುಷ್ಕರಗಳಂತಹ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಪೂರೈಕೆದಾರ ಕಂಪನಿಗಳು "ವಿಫಲವಾಗಿವೆ" ಎಂದು ಸಚಿವರು ಆರೋಪಿಸಿದ್ದಾರೆ.
ಪ್ರತಿ ಬಸ್‌ಗೆ ಕನಿಷ್ಠ 2.3 ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ಪ್ರಸ್ತಾವಿತ ಪ್ರಸ್ತಾವಕ್ಕೆ ವಿರುದ್ಧವಾಗಿ, ಕಂಪನಿಗಳು, ವೆಚ್ಚ ಕಡಿತ ಕ್ರಮವಾಗಿ ಪ್ರತಿ ಬಸ್‌ಗೆ 1.9 ರಿಂದ 2.0 ಸಿಬ್ಬಂದಿಯನ್ನು ಮಾತ್ರ ನಿಯೋಜಿಸುತ್ತಿದ್ದಾರೆ. ಇದು "BMTC ಗೆ ಕೆಟ್ಟ ಹೆಸರು ತರುತ್ತಿದೆ. ಪ್ರಗತಿಪರ ಮಹಾನಗರ ಎಂಬ ಬೆಂಗಳೂರಿನ ಇಮೇಜ್‌ಗೆ ಕಳಂಕ ತಂದಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ಬಸ್ಸುಗಳಿಗಿಂತ ಇವಿ ಬಸ್ಸುಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, ಈ ವರ್ಷವೊಂದರಲ್ಲೇ 100ಕ್ಕೂ ಹೆಚ್ಚು ಬ್ರೇಕ್ ಫೇಲ್ ಪ್ರಕರಣಗಳು ದಾಖಲಾಗಿವೆ ಹಾಗೂ ಕಳೆದ ಏಳು ತಿಂಗಳಲ್ಲಿ 700 ಬ್ಯಾಟರಿ ಸಂಬಂಧಿತ ಸಮಸ್ಯೆಗಳು ವರದಿಯಾಗಿದ್ದು, ಈ ವರ್ಷ 1700ಕ್ಕೂ ಹೆಚ್ಚು ಬ್ಯಾಟರಿ ಅನಾಹುತಗಳು ಸಂಭವಿಸಿವೆ ಎಂದು ಹೇಳಿದ್ದಾರೆ.
Advertisement