

ಬೆಂಗಳೂರು: ಗಾಂಧಿನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ. ಮತಗಳ್ಳತನ ನಡೆಯದಿದ್ದರೆ ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಸಂಸದರು ಆಯ್ಕೆ ಆಗುತ್ತಿದ್ದರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸನ್ ರೈಸ್ ಸರ್ಕಲ್‌ನಲ್ಲಿ ಮತಗಳ್ಳತನ (ವೋಟ್ ಚೋರಿ) ವಿರುದ್ಧ ನಡೆಯುತ್ತಿರುವ ‘ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ನಕಲಿ ಮತದಾರರ ಪಟ್ಟಿಯನ್ನು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೂ, ಇನ್ನು ಯಾವುದೇ ಕ್ರಮ ಆಗಿಲ್ಲ. ನಕಲಿ ಮತಗಳ ಅಳಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಇನ್ನೂ ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಈಗಾಗಲೇ ಮತಗಳ್ಳತನ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸವಿಸ್ತಾರವಾಗಿ ದೇಶದ ಜನತೆಗೆ ದಾಖಲೆಯ ಸಮೇತವಾಗಿ ನಿರೂಪಿಸಿದ್ದಾರೆ. ಇದು ಇಡೀ ದೇಶವೇ ಆತಂಕಪಡುವ ಸ್ಥಿತಿಯಲ್ಲಿದೆ. ಸಾಂವಿಧಾನಿಕ ಪೀಠಗಳನ್ನು ಬಿಜೆಪಿ ತಮ್ಮ ಮತ ಬ್ಯಾಂಕ್ ಮಾಡಿಕೊಂಡಿರುವುದು ಖಂಡನೀಯ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.
ಕರ್ನಾಟಕ ರಾಜ್ಯದ ಮಹದೇವಪುರ ಕ್ಷೇತ್ರದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ಸೃಷ್ಟಿಸಿ, ಅವರಿಂದ ಮತದಾನ ಪಡೆದುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಕ್ಕೆ ಜನರು ಪ್ರಶ್ನೆ ಮಾಡಬೇಕಾಗಿದೆ.
ಇದು ಸಂಪೂರ್ಣ ಪ್ರಜಾಪ್ರಭುತ್ವದ ಕಗ್ಗೊಲೆ. ಆಯೋಗವನ್ನು ತಮ್ಮ ಕೈಗೊಂಬೆಯಾಗಿಸಿಕೊಂಡು ಇಲ್ಲದೇ ಇರುವ ಮತದಾರರನ್ನು ಸೃಷ್ಟಿಸಿ, ಸಾಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪು ಮಾಡಿ ಮತಗಳ್ಳತನ ನಡೆಸಿ ಅಧಿಕಾರಕ್ಕೆ ಬಂದಿರುವುದು ಶೋಚನೀಯ.
ನಾವು ನಡೆಸುತ್ತಿರುವ ಮತಗಳ್ಳತನ ‘ವೋಟ್ ಚೋರಿ’ ವಿರುದ್ಧ ನಡೆಯುತ್ತಿರುವ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಿದ್ರೆ ಮಾಡುತ್ತಿರುವ ಅಧಿಕಾರಿಗಳನ್ನು ಎಚ್ಚರಿಸಬೇಕಾಗಿದೆ.
ದೇಶಾದ್ಯಂತ ಈ ಸಹಿ ಸಂಗ್ರಹ ನಡೆಯುತ್ತಿದ್ದು ಗಾಂಧಿನಗರ ಕ್ಷೇತ್ರದಿಂದಲೂ ಸುಮಾರು 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡುವ ಗುರಿಯನ್ನು ಹೊಂದಿದೆ ಎಂದರು.
Advertisement