ಸಾಹಿತ್ಯಾಸಕ್ತರಿಗೆ ಕನ್ನಡ ಪುಸ್ತಕ ಹಬ್ಬ; ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ-ಸಂಸ್ಕೃತಿ ಉತ್ಸವ

'ಕನ್ನಡ ಪುಸ್ತಕ ಹಬ್ಬ'ದ 5ನೇ ಆವೃತ್ತಿ ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ 'ಕೇಶವಶಿಲ್ಪ' ಸಭಾಂಗಣದಲ್ಲಿ ನಡೆಯಲಿದೆ.
Rashtrothana Parishad
ರಾಷ್ಟ್ರೋತ್ಥಾನ ಪರಿಷತ್
Updated on

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ವರ್ಷದ ಕನ್ನಡ ಪುಸ್ತಕ ಹಬ್ಬ ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ ಒಟ್ಟು 37 ದಿನಗಳ ಕಾಲ ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥರಾದ ಕೆ.ಎಸ್. ನಾರಾಯಣ್ ತಿಳಿಸಿದ್ದಾರೆ.

'ಕನ್ನಡ ಪುಸ್ತಕ ಹಬ್ಬ'ದ 5ನೇ ಆವೃತ್ತಿ ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ 'ಕೇಶವಶಿಲ್ಪ' ಸಭಾಂಗಣದಲ್ಲಿ ನಡೆಯಲಿದೆ. ನವೆಂಬರ್‌ 1 ಬೆಳಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥರು, ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವಸಂಪನ್ಮೂಲ ಸದಸ್ಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ ಸ್ಥಾಪಕ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಲಿದ್ದಾರೆ. ರಾಷ್ಟೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಹಬ್ಬ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಅವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

Rashtrothana Parishad
ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು‌: ಸಿಎಂ ಸಿದ್ದರಾಮಯ್ಯ

ಪುಸ್ತಕ ಹಬ್ಬದ ವೈಶಿಷ್ಟ್ಯ

ಈ ಬಾರಿಯ 37 ದಿನಗಳ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಪ್ರತಿದಿನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆಯುವ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೇ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳು ಶೇ 10 ರಿಂದ ಶೇ 50ರ ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ.

ಪ್ರತಿದಿನ ಸಾಯಂಕಾಲ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ. ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಛೇರಿ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ಈ ಬಾರಿ ಸುಮಾರು 10 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ.

ಮಕ್ಕಳಿಗಾಗಿ 'ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ', 'ಕನ್ನಡ ಗದ್ಯ ಮತ್ತು ಪದ್ಯಭಾಗಗಳನ್ನು ತಪ್ಪಿಲ್ಲದೆ ಓದುವ ಸ್ಪರ್ಧೆ' ಹಾಗೂ 'ಆಶುಭಾಷಣ ಸ್ಪರ್ಧೆ'ಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.

ʼವರ್ಷದಿಂದ ವರ್ಷಕ್ಕೆ ಕನ್ನಡ ಪುಸ್ತಕಕ್ಕೆ ಹಬ್ಬದಲ್ಲಿ ಭಾಗವಹಿಸುವವರು ಹಾಗೂ ಪುಸ್ತಕ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಪುಸ್ತಕ ಹಬ್ಬಕ್ಕೆ ಬಂದು ಪುಸ್ತಕ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಉಸ್ತುವಾರಿ ಮತ್ತು ಸಂವಿತ್ ರೀಸರ್ಚ್ ಫೌಂಡೇಶನ್ ನಿರ್ದೇಶಕರಾದ ಸುಬ್ರಹ್ಮಣ್ಯ ಬಿಎ ತಿಳಿಸಿದರು.

ಕನ್ನಡ ಪುಸ್ತಕ ಹಬ್ಬದಲ್ಲಿ ಬೇರೆ ಬೇರೆ ಪ್ರಕಾಶನದ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಸಾಹಿತ್ಯದ ಜೊತೆಗೆ ಪುರಾಣ, ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳೂ ಮಾರಾಟಕ್ಕಿರುತ್ತವೆ. ಹಿಂದಿನ ಬಾರಿ ಪುಸ್ತಕ ಹಬ್ಬಗಳಲ್ಲಿ ಕುವೆಂಪು, ತೇಜಸ್ವಿ, ಕೆ.ಎನ್‌. ಗಣೇಶಯ್ಯ ಮುಂತಾದವರ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇದೆʼ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್ ತಿಳಿಸಿದರು.

ಅನಕೃ ಪ್ರಶಸ್ತಿ ಪ್ರದಾನ

ಈ ಬಾರಿ ನಡೆಯುವ ಕನ್ನಡ ಪುಸ್ತಕ ಹಬ್ಬದಲ್ಲಿ ಅನಕೃ ಪ್ರತಿಷ್ಥಾನ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಇರಲಿದೆ. 2024ರ ಸಾಲಿನ ಅನಕೃ ಪ್ರಶಸ್ತಿಗೆ ಎಲ್‌ವಿ ಶಾಂತಕುಮಾರಿ ಭಾಜನರಾದರೆ, 2025ರ ಸಾಲಿನ ಪ್ರಶಸ್ತಿಯನ್ನು ಶತಾವಧಾನಿ ಆರ್.‌ಗಣೇಶ್‌ ಸ್ವೀಕರಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com