

ಬೆಂಗಳೂರು: ಡಾ. ಮಹೇಶ್ ಜೋಶಿ ಅಧ್ಯಕ್ಷರಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಣ ಹಾಗೂ ಅಧಿಕಾರ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಅವರನ್ನು ನೇಮಿಸಿದ್ದು, ಅವರಿಂದು ಕಸಾಪ ಕೇಂದ್ರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಕಳೆದ ಜುಲೈನಲ್ಲಿ ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು.
ವಿಚಾರಣೆಗೆ ಸಂಬಂಧಿಸಿದಂತೆ ಕಸಾಪದವರು ನಿಗದಿತ ಕಾಲಾವಧಿಯಲ್ಲಿ ಹಾಜರಾಗದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ನೀಡಿ, ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಇಲಾಖೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಈ ಶಿಫಾರಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಆಡಳಿತಾಧಿಕಾರಿ ನೇಮಕ ಮಾಡಿದೆ. ಮುಂದಿನ ಮೂರು ತಿಂಗಳು ಅಥವಾ ಕಸಾಪದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದ ವಿಚಾರಣೆ ಮುಗಿಯುವವರೆಗೂ ಆಡಳಿತಾಧಿಕಾರಿಯಾಗಿ ಗಾಯಿತ್ರಿ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Advertisement