

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನಡುವೆ RSS ಪಥಸಂಚಲನ ಮತ್ತು ಚಟುವಟಿಕೆಗಳ ವಿಚಾರದಲ್ಲಿ ನಡೆಯುತ್ತಿದ್ದ ವಾದ-ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ.
ಸರ್ಕಾರಿ ಆವರಣದಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ.
ಖಾಸಗಿ ಸಂಸ್ಥೆಗಳು, ಸಂಘಗಳು ಮತ್ತು ಗುಂಪುಗಳು ತಮ್ಮ ಚಟುವಟಿಕೆಗಳಿಗೆ ಸರ್ಕಾರಿ ಆಸ್ತಿ ಅಥವಾ ಸಾರ್ವಜನಿಕ ಸ್ಥಳಗಳನ್ನು ಬಳಸುವ ಮೊದಲು ಅನುಮೋದನೆ ಪಡೆಯಬೇಕೆಂದು ಸರ್ಕಾರ ಅಕ್ಟೋಬರ್ 18 ರಂದು ಆದೇಶ ಹೊರಡಿಸಿತ್ತು.
ಸರ್ಕಾರಿ ಆದೇಶವು ನಿರ್ದಿಷ್ಟವಾಗಿ ಆರ್‌ಎಸ್‌ಎಸ್ ಅನ್ನು ಹೆಸರಿಸದಿದ್ದರೂ, ಆದೇಶದ ನಿಬಂಧನೆಗಳು ಹಿಂದೂ ಬಲಪಂಥೀಯ ಸಂಘಟನೆಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಗುರಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಇದರಲ್ಲಿ RSS ರೂಟ್ ಮಾರ್ಚ್‌ಗಳು ಸೇರಿವೆ.
ಪಂಚಾಯತ್ ರಾಜ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಇತ್ತೀಚಿನ ಸಚಿವ ಸಂಪುಟ ನಿರ್ಧಾರವನ್ನು ಆಧರಿಸಿ ಈ ಆದೇಶವನ್ನು ನೀಡಲಾಗಿತ್ತು.
ವಿರೋಧ ಪಕ್ಷ ಬಿಜೆಪಿ ಕೂಡ ಈ ಕ್ರಮವನ್ನು ಟೀಕಿಸಿತ್ತು, ಇದು ಆರ್‌ಎಸ್‌ಎಸ್‌ನ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿತ್ತು.
ಆರ್‌ಎಸ್‌ಎಸ್ ಪಥಸಂಚಲನ (RSS Route March) ನಿರ್ಬಂಧಿಸುವ ಸಂಬಂಧ ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ನ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡದೇ ಇರುವ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ನ ಧಾರವಾಡ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಕಮಿಷನರ್ಗೆ ನೋಟಿಸ್ ನೀಡಿದೆ.
ಹೈಕೋರ್ಟ್ ಇಂದು ಹೇಳಿದ್ದೇನು?
ಅ.18 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಆರ್‌ಎಸ್‌ಎಸ್ ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ನೋಟಿಸ್ ನೀಡಿರುವ ಹೈಕೋರ್ಟ್ನ ಧಾರವಾಡ ಪೀಠ, ಅನುಮತಿಯಿಲ್ಲದೇ 10 ಜನ ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ. ರಸ್ತೆ, ಪಾರ್ಕ್, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್ ಕಾಯ್ದೆಯಲ್ಲಿ ಇರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಸಂವಿಧಾನದ ಆರ್ಟಿಕಲ್ 19 (1)A, B, ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ. ಸಂವಿಧಾನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶ ಕಿತ್ತುಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಕಲಬುರಗಿ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ
ಕಲಬುರಗಿ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ ವಿಚಾರವಾಗಿ ಹೈಕೋರ್ಟ್ನ ಕಲಬುರಗಿ ಪೀಠ ಈಗಾಗಲೇ ವಿಚಾರಣೆ ನಡೆಸಿದ್ದು, ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ಅಕ್ಟೋಬರ್ 30ರಂದು ವರದಿ ನೀಡುವಂತೆ ಕೋರ್ಟ್ ತಿಳಿಸಿದೆ.
Advertisement