
ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸ್ವಾಮೀಜಿ ಈ ರೀತಿಯ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ನ್ಯಾ. ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠ ತರಾಟೆಗೆ ತೆಗದುಕೊಂಡಿದೆ. ಅಲ್ಲದೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನೇರಿ ಶ್ರೀಗಳ ನಡೆ ವಿರುದ್ಧ ಸುಪ್ರೀಂ ಆಕ್ರೋಶ ವ್ಯಕ್ತಪಡಿಸಿದೆ. ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ, ಇದು ವಾಕ್ ಸ್ವಾತಂತ್ರ್ಯ ವ್ಯಾಪ್ತಿಗೆ ಬರಲ್ಲ. ನೀವು ಸ್ವಾಮೀಜಿಯಂತೆ ನಡೆದುಕೊಳ್ಳಿ ಎಂದು ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಕಾಡಸಿದ್ದೇಶ್ವರ ಶ್ರೀಗಳು ಕೆಲ ಅಸಂವಿಧಾನಿಕ ಪದ ಬಳಸಿದ್ದರು. ಹೀಗಾಗಿ ಜಿಲ್ಲಾಡಳಿತ ಶ್ರೀಗಳಿಗೆ ವಿಜಯಪುರ ಪ್ರವೇಶಕ್ಕೆ 2 ತಿಂಗಳ ನಿರ್ಬಂಧ ವಿಧಿಸಿತ್ತು.
ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳಕ್ಕೆ 4.5 ಕೋಟಿ ವೆಚ್ಚ ಖರ್ಚು ಸೇರಿದಂತೆ ಸಭಾಂಗಣದಲ್ಲಿ ಹೊಸ ಟಿವಿ, ಎಐ ಮಾನಿಟರ್ ಸಿಸ್ಟಂ, ರಿಕ್ಲೇನರ್ ಚೇರ್, ಮಸಾಜ್ ಚೇರ್ ಶಾಸಕರ ಕೊಠಡಿಗಳ ಭದ್ರತೆಗೆ ಸ್ಮಾರ್ಟ್ ಡೋರ್ ಲಾಕರ್ ಅಳವಡಿಕೆಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಆರೋಪಿಸಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಯುಟಿ ಖಾದರ್ ಭ್ರಷ್ಟಾಚಾರದ ಆರೋಪ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲ ರೋಗಕ್ಕೆ ಮದ್ದಿದೆ, ಆದರೆ ಅಸೂಯೆಗೆ ಮದ್ದಿಲ್ಲ. ಒಳ್ಳೇ ಕಾರ್ಯ ಆಗುವಾಗ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪಿಸಿದ್ದಾರೆ. ಯಾರಿಗಾದರೂ ಸಂಶಯ ಇದರೆ ನಾಳೆ ಬೆಳಗ್ಗೆ ಕಚೇರಿಯಲ್ಲಿ ಇರುತ್ತೇನೆ. ಏನಾದ್ರೂ ಕೇಳಬೇಕಿದ್ರೆ, ಸಂಶಯ ಇದ್ದರೆ ಬರಹ ರೂಪದಲ್ಲಿ ಕೊಡಲಿ. ಸಕಾರಾತ್ಮಕ ಉತ್ತರ ಕೊಡುತ್ತೇನೆ ಎಂದಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಹಾಸಿಗೆ, ದಿಂಬು, ಬೆಡ್ ಶೀಟ್ ನೀಡಬೇಕು. ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಬೆಂಗಳೂರಿನ 57 ಸಿಸಿಎಚ್ ಕೋರ್ಟ್ ಆದೇಶ ನೀಡಿದೆ. ತಿಂಗಳಿಗೊಮ್ಮೆ ಹಾಸಿಗೆ , ಬಟ್ಟೆ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳಲು ಜೈಲಾಧಿಕಾರಿಗಳಿಗೆ ಕೋರ್ಟ್ ಅವಕಾಶ ನೀಡಿದೆ. ಇದೇ ವೇಳೆ, ಮತ್ತೊಬ್ಬ ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ. ಮತ್ತೊಂದೆಡೆ ಕೊಲೆ ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಎ5 ನಂದೀಶ್ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಬಿಹಾರ ವಿಧಾಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹಿಸುತ್ತಿದೆ. ಸಿಎಂ ಸಿದ್ದರಾಮಯ್ಯ 300 ಕೋಟಿ ರೂಪಾಯಿ ಕಪ್ಪ ಕಾಣಿಕೆಯನ್ನು ಕಾಂಗ್ರೆಸ್ ಹೈಕಮಾಡ್ ಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಚಿವರು, ಶಾಸಕರಿಂದ ಹಣ ವಸೂಲಿ ಮಾಡಿದ್ದು, ಅದನ್ನು ಬಿಹಾರ ಚುನಾವಣೆಗೆ ನೀಡುವ ಮೂಲಕ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದರೆ. ಬಿಜೆಪಿಯ ಈ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಇನ್ನು ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದೇ ಶ್ರೀರಾಮುಲು. ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ ಎಂದು ಲೇವಡಿ ಮಾಡಿದ್ದಾರೆ.
ಫೋಟೋ, ವಿಡಿಯೋ ಇಟ್ಟುಕೊಂಡು ಮಹಿಳೆಗೆ ಬ್ಲ್ಯಾಕ್ಮೇಲ್ ಆರೋಪ ಸಂಬಂಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಪ್ತ ಆದಿತ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ. ಬ್ಲ್ಯಾಕ್ಮೇಲ್ ಮಾತ್ರವಲ್ಲದೆ ವಿಡಿಯೋವನ್ನ ಸಂಬಂಧಿಕರು, ಗೊತ್ತಿದ್ದವರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆದಿತ್ಯನ ವಿರುದ್ಧ ಹಲ್ಲೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ದೂರು ಕೊಟ್ಟರೆ ಹಲ್ಲೆ ಬಗ್ಗೆಯೂ ಪ್ರಕರಣ ದಾಖಲು ಮಾಡುತ್ತೇವೆ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ಹೇಳಿದ್ದಾರೆ. ಬ್ಲ್ಯಾಕ್ಮೇಲ್ ಆರೋಪ ಸಂಬಂಧ ಚಿಕ್ಕಮಗಳೂರಿನ ಆದಿಶಕ್ತಿ ನಗರದಲ್ಲಿನ ಆದಿತ್ಯ ಮನೆಗೇ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.
Advertisement