
ಮನೆಯ ಕಸ, ತ್ಯಾಜ್ಯಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ ಪಾಲಿಕೆಯ ಗಾಡಿ ಬಂದಾಗ ಕೊಡುವ ಬದಲು ಎಲ್ಲೆಂದರಲ್ಲಿ ಸುರಿಯುವ ನಗರದ ಜನತೆಗೆ ಎಚ್ಚರಿಕೆ ನೀಡುವುದಕ್ಕಾಗಿ ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯಲ್ಲಿ ಬರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ 190 ವಾರ್ಡ್‌ಗಳಲ್ಲಿ ಕಸ ಸುರಿಯುವ ಹಬ್ಬವನ್ನು ಪ್ರಾರಂಭಿಸಿದೆ. ಬಿಎಸ್‌ಡಬ್ಲ್ಯೂಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಕಸ ಎಸೆಯುವ ವಿರುದ್ಧ ಅಭಿಯಾನ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ದತ್ತಾತ್ರೇಯ ವಾರ್ಡ್, ಶಿವಾಜಿನಗರ ವ್ಯಾಪ್ತಿಯಲ್ಲಿ ಬರುವ ಎಸ್.ಆರ್ ನಗರ, ಸಂಪಂಗಿರಾಮನಗರದಲ್ಲಿ ಮನೆಮುಂದೆ ಕಸ ಸುರಿಯಲಾಗಿದೆ. ಅಲ್ಲದೆ ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಲಾಗಿದೆ.
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಚಿತ್ರ ನಟ ಪ್ರಕಾಶ್ ರಾಜ್ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 70 ಮಂದಿಯನ್ನು ಆಯ್ಕೆ ಮಾಡಲಾಗಿದೆ.ಇದೇ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೆ ಈ ಆಯ್ಕೆ ನಡೆದಿದೆ. ಜಿಲ್ಲಾವಾರು, ಸಾಮಾಜಿಕ ಪರಿಪಾಲನೆ, ಹಾಗೂ ಆಯ್ಕೆ ಸಮಿತಿ ಶಿಫಾರಸ್ಸುಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಬಾರಿ 12 ಮಹಿಳೆಯರು ಹಾಗೂ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭೆಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದ ಅರ್ಹರನ್ನು ಬಹುತೇಕ ಆಯ್ಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಕೂತೂಹಲ ಕೆರಳಿಸಿರುವ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಕುರಿತು, ಕಲಬುರಗಿಯ ಹೈಕೋರ್ಟ್ ಪೀಠ ಇಂದು ಮಹತ್ವದ ಸೂಚನೆ ನೀಡಿದೆ. ನವೆಂಬರ್ 5ಕ್ಕೆ ಬೆಂಗಳೂರಿನಲ್ಲಿ ಶಾಂತಿಸಭೆ ನಡೆಸಲು ಸೂಚನೆ ನೀಡಿದ್ದು, ನ.7ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿದೆ. ಆರ್‌ಎಸ್‌ಎಸ್ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಮತ್ತೊಂದೆಡೆ 5 ಸಂಘಟನೆಗಳು ಅಂದೇ ನಮಗೂ ಅವಕಾಶ ಕೊಡಿ ಎಂದು ಅರ್ಜಿ ಹಾಕಿದ್ದವು. ಜಿಲ್ಲಾಡಳಿತ ನೇತೃತ್ವದಲ್ಲಿ ನಡೆದ ಶಾಂತಿಸಭೆಯಲ್ಲಿ ಒಮ್ಮತಕ್ಕೆ ಬಾರದ ಹಿನ್ನೆಲೆ ಕೋರ್ಟ್ ಮತ್ತೊಂದು ಅವಕಾಶ ನೀಡಿದೆ. ಹೀಗಾಗಿ ನ.2ರಂದು ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನ ಮುಂದೂಡಿಕೆಯಾಗಲಿದೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾದ ಗುರುಮಠಕಲ್ ಪಟ್ಟಣದಲ್ಲಿ ಶುಕ್ರವಾರ ಪಥಸಂಚಲನ ನಡೆಸಲು ಯಾದಗಿರಿ ಜಿಲ್ಲಾಡಳಿತ RSS ಗೆ ಷರತ್ತುಬದ್ಧ ಅನುಮತಿ ನೀಡಿದೆ. ಮತ್ತೊಂದೆಡೆ, ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪದ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಅವರ ಅಮಾನತು ಆದೇಶವನ್ನು ಕೆಎಸ್ಎಟಿ ತಡೆಹಿಡಿದಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಯನಾಡ್ ಪ್ರವಾಸೋದ್ಯಮದ ಪರವಾಗಿ ಜಾಹೀರಾತು ನೀಡಿರುವುದು ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಈ ಕುರಿತಾಗಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಟ್ವೀಟ್ ಮಾಡಿದ್ದು ತಮ್ಮ ಪಕ್ಷದ ಅಧಿನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಮೆಚ್ಚಿಸಲು ಕನ್ನಡ ನಾಡಿನ ಗೌರವವನ್ನು ಅಡವಿಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ ಎಂದು ಅವರು ಆರೋಪ ಮಾಡಿದ್ದಾರೆ. ಬಿಜೆಪಿ ಆರೋಪಕ್ಕೆ ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಜಾಹಿರಾತು ಯಾಕೆ ಕೊಟ್ಟಿದ್ದಾರೆ ಎಂದು ಮಾಹಿತಿ ಕೇಳಿದ್ದೇನೆ. ಬಳಿಕ ಪ್ರತಿಕ್ರಿಯೆ ನೀಡುತ್ತೇನೆ" ಎಂದು ತಿಳಿಸಿದ್ದಾರೆ.
ಎಂಜಿನಿಯರ್ ಕೆ. ಅರವಿಂದ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕ್ರಿಮಿನಲ್ ತನಿಖೆಗೆ ಸಹಕರಿಸುವಂತೆ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಎಂಡಿ ಭವಿಶ್ ಅಗರ್ವಾಲ್ ಮತ್ತು ಹೋಮೋಲೊಗೇಶನ್ ಎಂಜಿನಿಯರಿಂಗ್ ಮುಖ್ಯಸ್ಥ ಸುಬ್ರತ್ ಕುಮಾರ್ ದಾಸ್ ಅವರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಅರ್ಜಿದಾರರಿಗೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ನವೆಂಬರ್ 17 ರವರೆಗೆ ವಿಸ್ತರಿಸಿ, ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಅವರು ಸುಬ್ರಹ್ಮಣ್ಯಪುರ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
Advertisement