News Headlines 31-10-25 | ಸಿದ್ದು ಸರ್ಕಾರದ ವಿರುದ್ಧ BJP 'ಕಿಲ್ಲಿಂಗ್ ಕಾಂಗ್ರೆಸ್' ಪೋಸ್ಟರ್; ಬುರುಡೆ ಪ್ರಕರಣ ರದ್ದತಿಗೆ ಮಹೇಶ್-ಗಿರೀಶ್ ಅರ್ಜಿ; ಪ್ರೋ. ಬಿ.ಸಿ ಮೈಲಾರಪ್ಪ ಬಂಧನ!

News Headlines 31-10-25 | ಸಿದ್ದು ಸರ್ಕಾರದ ವಿರುದ್ಧ BJP 'ಕಿಲ್ಲಿಂಗ್ ಕಾಂಗ್ರೆಸ್' ಪೋಸ್ಟರ್; ಬುರುಡೆ ಪ್ರಕರಣ ರದ್ದತಿಗೆ ಮಹೇಶ್-ಗಿರೀಶ್ ಅರ್ಜಿ; ಪ್ರೋ. ಬಿ.ಸಿ ಮೈಲಾರಪ್ಪ ಬಂಧನ!

1. ಸಿದ್ದು ಸರ್ಕಾರದ ವಿರುದ್ಧ BJP 'ಕಿಲ್ಲಿಂಗ್ ಕಾಂಗ್ರೆಸ್' ಪೋಸ್ಟರ್

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೀತಿಗಳು ಕರ್ನಾಟಕವನ್ನು ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳವನ್ನಾಗಿ ಮಾಡಿವೆ ಎಂದು ಆರೋಪಿಸಿ ವಿರೋಧ ಪಕ್ಷವಾದ ಬಿಜೆಪಿ ಇಂದು 'ಕಿಲ್ಲರ್ ಕಾಂಗ್ರೆಸ್' ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಮಹಿಳಾ ಸದಸ್ಯರೊಂದಿಗೆ ಬೆಂಗಳೂರಿನಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು. ಪೋಸ್ಟರ್‌ನಲ್ಲಿ ಕಾಂಗ್ರೆಸ್ ಚಿಹ್ನೆಯ ಮುಂದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರ ಫೋಟೋಗಳಿದ್ದು ಹಸ್ತವು ರಕ್ತಸಿಕ್ತವಾಗಿರುವಂತೆ ತೋರಿಸಲಾಗಿದೆ. ನಂತರ ಮಾತನಾಡಿದ ಶೋಭಾ ಕರಂದ್ಲಾಜೆ, 'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಮಹಿಳೆಯರ ಮೇಲಿನ 1,800ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕಿಶೋರ್ ಅವರಿಗೆ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.

2. ಬುರುಡೆ ಪ್ರಕರಣ ರದ್ದತಿಗೆ ಮಹೇಶ್-ಗಿರೀಶ್ ಅರ್ಜಿ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎಂಬ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಧರ್ಮಸ್ಥಳದ ವಿರುದ್ಧ ಗಂಭೀರ ಆರೋಪ ಮಾಡಿದ್ದ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಅವರೇ ಇದೀಗ ಮೂಲ ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರಕರಣದ ಮುಂದಿನ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. . ಅರ್ಜಿದಾರರ ಪರ ವಕೀಲ ಬಾಲಕೃಷ್ಣನ್‌ ವಾದ ಮಂಡಿಸಿದ್ದು, ಎಫ್‌ಐಆರ್‌ನಲ್ಲಿ ಆರೋಪಿಗಳು ಎಂದು ಉಲ್ಲೇಖಿಸಿಲ್ಲ. ಅರ್ಜಿದಾರರಿಗೆ ಈಗಾಗಲೇ 9 ಬಾರಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ. ಎಸ್‌ಐಟಿ ಸಮನ್ಸ್ ನೀಡಿರುವುದು ಕಾನೂನುಬಾಹಿರ. ಅರ್ಜಿದಾರರು ಆರೋಪಿಗಳೂ ಅಲ್ಲ, ಸಾಕ್ಷಿಗಳೂ ಅಲ್ಲ ಎಂದು ವಾದಿಸಿದ್ದರು.

3. ಕಸ ಎಸೆಯುವವರ ಮನೆ ಮುಂದೆ GBA ಕಸ ಸುರಿಯುವ ಅಭಿಯಾನ: 2.80 ಲಕ್ಷ ವಸೂಲಿ

ಬೆಂಗಳೂರು ನಗರದಲ್ಲಿ ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದು, ಖಾಲಿ ಸೈಟ್ ಗಳಲ್ಲಿ ಅಕ್ಕಪಕ್ಕದ ಮನೆಯವರು ತಂದು ಕಸ ಸುರಿಯುವುದು ಇತ್ಯಾದಿ ಸಮಸ್ಯೆ ಮಿತಿಮೀರಿದೆ. ಹೀಗೆ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. GBA ಮಾರ್ಷಲ್ಗಳು ನಿನ್ನೆ ಗುರುವಾರ ಕಸ ಸುರಿಯುವ ಹಬ್ಬ ಎಂಬ ಕಾರ್ಯಾಚರಣೆಯನ್ನೇ ಆರಂಭಿಸಿದ್ದಾರೆ. ಮಲ್ಲೇಶ್ವರ, ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ ಸೇರಿದಂತೆ ಹಲವೆಡೆ ಕಸ ಎಸೆಯುವವರನ್ನು ಮಾರ್ಷಲ್‌ಗಳ ಮೂಲಕ ಪತ್ತೆಹಚ್ಚಿದ್ದ ಜಿಬಿಎ ಒಟ್ಟಾರೆ 218 ಮನೆಗಳ ಮುಂದೆ ಕಸ ಸುರಿದಿದ್ದು ದಂಡದ ರೂಪದಲ್ಲಿ ಒಟ್ಟಾರೆ 2.80 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಅಲ್ಲದೆ ಕಸ ಸುರಿಯುತ್ತಿರುವವರಿಗೆ 10 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

4. ವಿಧವೆಗೆ ಲೈಂಗಿಕ ಕಿರುಕುಳ: ಮಾಜಿ ಕುಲಸಚಿವ ಮೈಲಾರಪ್ಪ ಬಂಧನ

ವಿಧವೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಬಿ.ಸಿ ಮೈಲಾರಪ್ಪನನ್ನು ಬಸವೇಶ್ವರನಗರದ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ 2022ರ ನವೆಂಬರ್ ನಲ್ಲಿ ಅಂದಿನ ಬೆಂಗಳೂರು ವಿ.ವಿ ನಿರ್ದೇಶಕರಾದ ಪ್ರೊ. ಬಿ.ಸಿ ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಮೇಲೆ ಮೈಲಾರಪ್ಪ ಮಹಿಳೆಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಡ ಏರುತ್ತಿದ್ದರು. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.

5. ಆನೆ ದಾಳಿ: ಇಬ್ಬರು ಬಲಿ, ತಹಶೀಲ್ದಾರ್ ಜೀಪ್ ತಡೆ ಗ್ರಾಮಸ್ಥರ ಪ್ರತಿಭಟನೆ

ಆನೆ ದಾಳಿಗೆ ಇಬ್ಬರು ಸಹೋದರರು ಬಲಿಯಾಗಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ಕೆರೆಕಟ್ಟೆ ಸಮೀಪದ ಕೆರೆಮನೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಹರೀಶ್ ಹಾಗೂ ಉಮೇಶ್ ಆನೆ ದಾಳಿಗೆ ಪ್ರಾಣ ಕಳೆದುಕೊಂಡವರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತೆರಳುತ್ತಿದ್ದ ತಹಶೀಲ್ದಾರ್ ಅವರಿದ್ದ ಜೀಪನ್ನು ತಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಸಂದರ್ಭದಲ್ಲಿ ಮೊದಲು ವ್ಯಕ್ತಿಯೊಬ್ಬನ ಮೇಲೆ ಆನೆ ದಾಳಿ ಮಾಡಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ನಾಯಿ ಏಕೆ ಬೊಗಳುತ್ತಿದೆ ಎಂದು ನೋಡಲು ಹೋಗಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ಆನೆ ದಾಳಿ ಮಾಡಿ ಕೊಂದು ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com