ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನೂರಾರು ಅತ್ಯಾಚಾರ, ಕೊಲೆ ಮತ್ತು ರಹಸ್ಯ ಸಮಾಧಿ ಆರೋಪಗಳ ಹಿಂದೆ 'ಬಹಳ ದೊಡ್ಡ ಪಿತೂರಿ' ನಡೆದಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದು ಪ್ರಕರಣವನ್ನು NIA ಅಥವಾ CBIಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಧರ್ಮಸ್ಥಳ ವಿರುದ್ಧದ ಪಿತೂರಿ ಮತ್ತು ಅಪಪ್ರಚಾರ ಅಭಿಯಾನವನ್ನು ಖಂಡಿಸಿ ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ಶಾಸಕರು ಮತ್ತು ಹಲವು ನಾಯಕರು 'ಧರ್ಮಸ್ಥಳ ಚಲೋ' rally ಕೈಗೊಂಡಿದ್ದು, ಅದಕ್ಕೆ ಮುಂಚಿತವಾಗಿ, ನಾಯಕರು ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸಹ ಭೇಟಿ ಮಾಡಿದರು. ಜಾತಿ, ಧರ್ಮ ಲೆಕ್ಕಿಸದೆ ಎಲ್ಲರೂ ಸಿಬಿಐ ಅಥವಾ ಎನ್ಐಎಯಿಂದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಧರ್ಮಸ್ಥಳಕ್ಕೆ ಬಿಜೆಪಿಯ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಧರ್ಮಸ್ಥಳದ ವಿಷಯವಾಗಿ ರಾಜಕೀಯ ಮಾಡುತ್ತಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ರಾಜಕೀಯ ಯಾತ್ರೆ, ಅದರಿಂದ ಅವರಿಗೆ ರಾಜಕೀಯ ಲಾಭ ಸಿಗುವುದಿಲ್ಲ, ಪ್ರಕರಣದ ಸಂಬಂಧ NIA ತನಿಖೆ ಅಗತ್ಯವಿಲ್ಲ, SIT ಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮೈಸೂರಿಗೆ ಆಗಮಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಂಡರು. ಬಳಿಕ ರಾಷ್ಟ್ರಪತಿಗಳು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯುಷ್) ನ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಮುರ್ಮು, ಕನ್ನಡ ಕಲಿಯಲು ಪ್ರಯತ್ನಿಸುವುದಾಗಿ ಹೇಳಿದ್ದು, ದೇಶದ ಪ್ರತಿಯೊಂದು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ತಮಗೆ ಆಳವಾದ ಗೌರವವಿದೆ ಎಂದು ಒತ್ತಿ ಹೇಳಿದರು. ಇದಕ್ಕೂ ಮುನ್ನ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದಲ್ಲಿ ಭಾಷಣ ಮಾಡಿ ವೇದಿಕೆಯಲ್ಲಿ ಕುಳಿತಿದ್ದ ಗಣ್ಯರಿಗೆ ಭಾಷೆ ಅರ್ಥವಾಗಿದೆಯೇ ಎಂದು ಕೇಳಿದ್ದರು. ಇಂದು ರಾತ್ರಿ ರಾಷ್ಟ್ರಪತಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಸೆ.02 ರಂದು ರಾಷ್ಟ್ರಪತಿಗಳು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಭದ್ರತಾ ದೃಷ್ಟಿಯಿಂದ ಸೆ.2 ರಂದು ಪ್ರವಾಸಿಗರಿಗೆ ಅರಮನೆಯ ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಟ್ಟಣವರ್ ಮತ್ತು ತಿಮರೋಡಿ ಸಮಾಜದ ಸೌಹಾರ್ದಮಯ ವಾತಾವರಣ ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮದ ಪ್ರವೀಣ್ ಕೆಆರ್ ದೂರು ನೀಡಿದ್ದಾರೆ. ಆ.30 ರಂದು ಯೂಟ್ಯೂಬ್ ನಲ್ಲಿ ಕಂಡ ವಿಡಿಯೋವೊಂದರಲ್ಲಿ ಮದನ್ ಬುಗುಡಿ ಎಂಬ ವ್ಯಕ್ತಿಯ ಜತೆಗೂಡಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಗಿರೀಶ್ ಮಟ್ಟಣ್ಣವರ್ ಸಮಾಜದ ಸ್ವಾಸ್ಥ್ಯ ಕದಡುವ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತನ್ನ ಮಾಜಿ ಪ್ರೇಯಸಿಗೆ ಕ್ಯಾಬ್ ಚಾಲಕನೊಬ್ಬ ಹಾಡು ಹಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆಯೊಂದು ಬನ್ನೇರುಘಟ್ಟ ಬಳಿಯ ಹೊಮ್ಮದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವರದಿಯಾಗಿದೆ. ಬನ್ನೇರುಘಟ್ಟದ ಮಲೆನಲ್ಲಸಂದ್ರ ನಿವಾಸಿ ವಿಟ್ಠಲ್ ಆರೋಪಿಯಾಗಿದ್ದು, ಬನ್ನೇರುಘಟ್ಟದ ಬಿಲ್ವರದಹಳ್ಳಿ ನಿವಾಸಿ ವನಜಾಕ್ಷಿ ಸಂತ್ರಸ್ತ ಮಹಿಳೆಯಾಗಿದ್ದಾಳೆ. ವನಜಾಕ್ಷಿ ಅವರಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವನಜಾಕ್ಷಿ ತನ್ನ ಲಿವ್-ಇನ್ ಸಂಗಾತಿ ಮುನಿಯಪ್ಪ ಮತ್ತು ವೃದ್ಧ ಸಂಬಂಧಿ ಜೊತೆಗೆ ಕುಟುಂಬದ ಸದಸ್ಯರೊಬ್ಬರನ್ನು ಭೇಟಿ ಮಾಡಲು ಕಾರಿನಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಮುನಿಯಪ್ಪ ದೂರಿನ ಆಧಾರದ ಮೇಲೆ, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 6ರವರೆಗೂ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಉಳಿದೆಡೆ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಇಂದು ಸಂಜೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ.
Advertisement