
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಇನ್ನು ಇತಿಹಾಸದ ಪುಟ ಸೇರಿದ್ದು, ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ರಾಜ್ಯ ಸರ್ಕಾರ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಮಹಾನಗರ ಪಾಲಿಕೆಗಳನ್ನಾಗಿ ರಚನೆ ಮಾಡಿ ಮಂಗಳವಾರ ಅಧಸೂಚನೆ ಹೊರಡಿಸಿದೆ.
ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾದ 2024ರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಡಿಯಲ್ಲಿ ಬಿಬಿಎಂಪಿಯನ್ನು ಐದು ಮಹಾನಗರ ಪಾಲಿಕೆಗಳಾಗಿ ರಚನೆ ಮಾಡಿ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.
ಈ ಕ್ರಮವು ಬೆಂಗಳೂರು ಪಶ್ಚಿಮ ನಗರ ಮಹಾನಗರ ಪಾಲಿಕೆ, ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆ, ಬೆಂಗಳೂರು ಪೂರ್ವ ಮಹಾನಗರ ಬಾಲಿಕೆ ಮತ್ತು ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗಳ ರಚನೆಗೆ ದಾರಿ ಮಾಡಿಕೊಡುತ್ತದೆ.
ಅಧಿಸೂಚನೆಯಲ್ಲಿ ಐದು ನಿಗಮಗಳ ಗಡಿಗಳನ್ನು ಸಹ ನಿಗದಿಪಡಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಅಡಿಯಲ್ಲಿ ಹೊಸದಾಗಿ ರಚನೆಯಾದ ಮಹಾನಗರ ಪಾಲಿಗಳಿಗೆ ವ್ಯಾಪಕ ಆಡಳಿತಾತ್ಮಕ ಅನುಭವ ಹೊಂದಿರುವ ಹಿರಿಯ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ತಿಳಿಸಿದ್ದರು.
"ನಾವು ಈ ಐದು ಮಹಾನಗರ ಪಾಲಿಕೆಗೆಳಿಗೆ ಅಧಿಕಾರಿಗಳ ನೇಮಕಾತಿಯ ಬಗ್ಗೆ ಚರ್ಚಿಸಿದ್ದೇವೆ ಮತ್ತು ಈಗಾಗಲೇ ಸ್ಥಳೀಯವಾಗಿ ಸೇವೆ ಸಲ್ಲಿಸುತ್ತಿರುವವರನ್ನು ನೇಮಿಸಲು ನಿರ್ಧರಿಸಲಾಗಿದೆ" ಎಂದು ಅವರು ಹೇಳಿದರು.
ಜಿಬಿಎಗೆ ಮುಖ್ಯಮಂತ್ರಿಗಳು ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರು ಪದನಿಮಿತ್ತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
Advertisement