
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನನ್ನು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯವು ಇದೇ 6ರವರೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿದೆ.
ತಮ್ಮ ವಶದಲ್ಲಿದ್ದ ಸಾಕ್ಷಿ ದೂರುದಾರನನ್ನು ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗೆ ಸಲುವಾಗಿ ಆತನನ್ನು ಮತ್ತಷ್ಟು ದಿನ ಎಸ್‌ಐಟಿ ವಶಕ್ಕೆ ಒಪ್ಪಿಸುವಂತೆ ಸರ್ಕಾರಿ ವಕೀಲರು ಬೇಡಿಕೆ ಸಲ್ಲಿಸಿದರು. ಈ ಕೋರಿಕೆಯನ್ನು ಮನ್ನಿಸಿದ ನ್ಯಾಯಾಲಯವು ಸೆ. 6ರವರೆಗೆ ಆತನನ್ನು ಎಸ್‌ಐಟಿ ವಶಕ್ಕೆ ನೀಡಿದೆ.
ಸಾಕ್ಷಿ ದೂರುದಾರನನ್ನು ನ್ಯಾಯಾಲಯದಿಂದ ನೇರವಾಗಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದರು. ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹಾಗೂ ಅಲ್ಲಿಂದ ಆತನನ್ನು ಕಚೇರಿಗೆ ಕರೆದೊಯ್ಯುವಾಗಲೂ ಮುಖಕ್ಕೆ ಮುಸುಕು ಹಾಕಲಾಗಿತ್ತು.
ಆಗಸ್ಟ್ 22 ರಂದು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಎಸ್‌ಐಟಿ ಬಂಧಿಸಿದ ದೂರುದಾರ ಸಾಕ್ಷಿಯನ್ನು 12 ದಿನಗಳ ಪೊಲೀಸ್ ಕಸ್ಟಡಿ ಮುಗಿದ ನಂತರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ದೂರು ದಾಖಲಿಸುವ ಮೊದಲು ಅವರು ಆಶ್ರಯ ಪಡೆದಿದ್ದ ಸ್ಥಳಗಳ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 229 (ಸುಳ್ಳು ಸಾಕ್ಷ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಎಸ್‌ಐಟಿ ಆರಂಭದಲ್ಲಿ ದೂರುದಾರ-ಸಾಕ್ಷಿಯನ್ನು ಬಂಧಿಸಿತ್ತು.
ಇದರ ನಡುವೆ ಚಾಮರಾಜ ಶಾಸಕ ಕೆ. ಹರೀಶ್ ಗೌಡ ನೇತೃತ್ವದ ನಿಯೋಗವು ಸುಮಾರು 2,000 ಭಕ್ತರು ಮತ್ತು ಬೆಂಬಲಿಗರೊಂದಿಗೆ ಬುಧವಾರ ಸಂಜೆ 50 ವಾಹನಗಳಲ್ಲಿ ಧರ್ಮಸ್ಥಳ ತಲುಪಿತು. ಈ ನಿಯೋಗವು ಗುರುವಾರ ಬೆಳಿಗ್ಗೆ, ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದ್ದಾರೆ. ಧರ್ಮಸ್ಥಳದ ಬಗ್ಗೆ ಹರಡಲಾಗುತ್ತಿದೆ ಎಂದು ಹೇಳಲಾದ ಸುಳ್ಳು ಪ್ರಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಈ ಸರ್ವಧರ್ಮ ಏಕತೆಯ ಕೇಂದ್ರದ ಪಾವಿತ್ರ್ಯತೆ ಮತ್ತು ಸಾಮರಸ್ಯವನ್ನು ರಕ್ಷಿಸಲು ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ" ಎಂದು ಹರೀಶ್ ಗೌಡ ಸುದ್ದಿಗಾರರಿಗೆ ತಿಳಿಸಿದರು.
Advertisement