
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ(NIRF)ವನ್ನು ಘೋಷಿಸಿದ್ದು, ಒಟ್ಟಾರೆ ವಿಭಾಗದಲ್ಲಿ ಐಐಟಿ ಮದ್ರಾಸ್ ಸತತ ಏಳನೇ ವರ್ಷವೂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಸಂಸ್ಥೆಯಾಗಿರುವ ಐಐಟಿ ಮದ್ರಾಸ್, 2016ರಲ್ಲಿ ಮೊದಲ ಬಾರಿ ಬಿಡುಗಡೆಯಾಗಿದ್ದ ಎಎಫ್ಆರ್ ಎಫ್ ಪಟ್ಟಿಯಲ್ಲೂ ನಂಬರ್ 1 ಸ್ಥಾನ ಪಡೆದುಕೊಂಡಿತ್ತು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ಭಾರತ್ ಮಂಟಪದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ NIRF 2025 ಅನ್ನು ಬಿಡುಗಡೆ ಮಾಡಿದರು. ಒಟ್ಟು 14,163 ವಿಶ್ವವಿದ್ಯಾಲಯಗಳು 17 ವಿಭಾಗಗಳಲ್ಲಿ ಉನ್ನತ ಸ್ಥಾನಗಳಿಗಾಗಿ ಸ್ಪರ್ಧಿಸಿದ್ದವು.
ಐಐಟಿ ಮದ್ರಾಸ್ ನಾವೀನ್ಯತೆ ಸಂಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ ವಿಭಾಗಗಳಲ್ಲಿ ಅತ್ಯುತ್ತಮವೆಂದು ರೇಟಿಂಗ್ ಪಡೆದಿದೆ. ಆದರೆ ಸಂಶೋಧನಾ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc) ಮೊದಲ ಸ್ಥಾನ ಪಡೆದಿದ್ದು, ಐಐಟಿ ಮದ್ರಾಸ್ ಎರಡನೇ ಸ್ಥಾನದಲ್ಲಿದೆ.
'ಒಟ್ಟಾರೆ' ವಿಭಾಗದಲ್ಲಿ ಐಐಎಸ್ಸಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ. IISc ಬೆಂಗಳೂರು ಸಂಶೋಧನಾ ವಿಭಾಗದಲ್ಲಿ ಐಐಟಿ ಮದ್ರಾಸ್ ಅನ್ನು ಹಿಂದಿಕ್ಕುವುದರ ಜೊತೆಗೆ, ಇದು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಉದ್ಯಾನ ನಗರಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಭಾರತದ ಅತ್ಯುತ್ತಮ ಕಾನೂನು ಕಾಲೇಜು ಎಂಬ ಗೌರವಕ್ಕೆ ಪಾತ್ರವಾಗಿದೆ.
ಬೆಂಗಳೂರಿನ ಇನ್ನೂ ಒಂದೆರಡು ಪ್ರತಿಷ್ಠಿತ ಸಂಸ್ಥೆಗಳು ಸಹ ಈ ಪಟ್ಟಿಗೆ ಸೇರ್ಪಡೆಯಾಗಿವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ಎರಡನೇ ಅತ್ಯುತ್ತಮ ನಿರ್ವಹಣಾ ಸಂಸ್ಥೆ ಮತ್ತು ನಾವೀನ್ಯತೆಗೆ ಮೂರನೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲ ಮೂರು ಶ್ರೇಯಾಂಕಗಳಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಸಂಸ್ಥೆ ಮಣಿಪಾಲದಲ್ಲಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಗಿದ್ದು, ಇದು ದೇಶದ ಮೂರನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿದೆ.
ಒಟ್ಟಾರೆ ಶ್ರೇಯಾಂಕ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ಐಐಟಿ ಬಾಂಬೆ, ಎಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ಸ್ಥಾನ ಮತ್ತು ನಾವೀನ್ಯ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ನಿರ್ವಹಣಾ ಸಂಸ್ಥೆ ವಿಭಾಗದಲ್ಲಿ ಐಐಎಂ ಅಹಮದಾಬಾದ್ ಅಗ್ರಸ್ಥಾನದಲ್ಲಿದ್ದರೆ, ವಾಸ್ತುಶಿಲ್ಪ ಮತ್ತು ಯೋಜನಾ ವಿಭಾಗದಲ್ಲಿ ಐಐಟಿ ರೂರ್ಕಿ ಅಗ್ರಸ್ಥಾನದಲ್ಲಿದೆ.
ದೆಹಲಿಯ ಏಮ್ಸ್ ವೈದ್ಯಕೀಯ ಶಿಕ್ಷಣ ಮತ್ತು ದಂತ ವೈದ್ಯಕೀಯ ವಿಭಾಗದಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ, ಐಐಟಿ ದೆಹಲಿ ಸಂಶೋಧನಾ ಸಂಸ್ಥೆಯಲ್ಲಿ ಅಗ್ರಸ್ಥಾನದಲ್ಲಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) ಅಡಿಯಲ್ಲಿ ಪ್ರತಿ ವರ್ಷ ಪ್ರಕಟವಾಗುವ ಈ ಶ್ರೇಯಾಂಕಗಳು, ಶಿಕ್ಷಣ ಸಂಸ್ಥೆಗಳ ಬೋಧನೆ, ಸಂಶೋಧನೆ, ನವೀನತೆ ಹಾಗೂ ಒಟ್ಟಾರೆ ಶೈಕ್ಷಣಿಕ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತವೆ.
Advertisement