
ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದ ಸಂಬಂಧ ಉದ್ಯಮಿ ಕೆಜಿಎಫ್ ಬಾಬು ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಕೆಜಿಎಫ್ ಬಾಬು ಅವರನ್ನು ಮಧ್ಯಾಹ್ನ 3 ಗಂಟೆವರೆಗೂ ವಿಚಾರಣೆ ನಡೆಸಲಾಗಿದೆ. ಬಳಿಕ ಮತ್ತೂಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.
ಈ ಪ್ರಕರಣದಲ್ಲಿ ಬಾಬು ಅವರಿಗೆ ಆಗಸ್ಟ್ 22ರಂದು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ರೆಡ್ಡಿ ಸ್ಟ್ರಕ್ಚರ್ಸ್ ಮತ್ತು ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿರುವ ಸಂಬಂಧ ದಾಖಲೆಗಳನ್ನು ನೀಡಿ ಎಂದು ಬಾಬು ಅವರಿಗೆ ಸೂಚಿಸಿದ್ದರು.
ಲೋಕಾಯುಕ್ತ ಕಚೇರಿಯಿಂದ ಹೊರಬಂದ ಬಾಬು ಅವರು, 2013ರಲ್ಲಿ ಮನೆ ಖರೀದಿಸುವ ಸಂದರ್ಭದಲ್ಲಿ ಸಾಲ ನೀಡುವಂತೆ ಜಮೀರ್ ಅವರು ಕೋರಿದ್ದರು. ನಾನು ₹3.50 ಕೋಟಿ ಸಾಲ ನೀಡಿದ್ದೆ. ಅದನ್ನು ಹಲವು ಬಾರಿ ವಾಪಸ್ ಕೇಳಿದ್ದೆ, ಅವರಿನ್ನೂ ನೀಡಿಲ್ಲ. ಸಾಲ ನೀಡಿದ್ದಕ್ಕೆ ಸಂಬಂಧಿಸಿದ ವಿವರಗಳನ್ನು ನಾನು ಮತ್ತು ಜಮೀರ್ ಇಬ್ಬರೂ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಉಲ್ಲೇಖಿಸಿದ್ದೇವೆ ಎಂದರು.
ಈ ಪ್ರಕರಣದ ತನಿಖೆಯನ್ನು ಮೊದಲು ಇ.ಡಿ (ಜಾರಿ ನಿರ್ದೇಶನಾಲಯ) ನಡೆಸುತ್ತಿತ್ತು. ಅವರಿಗೆ ಎಲ್ಲ ದಾಖಲೆ ನೀಡಿದ್ದೆ. ಈಗ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದೆ. ಅವರೂ ದಾಖಲೆ ಕೇಳಿದ್ದಾರೆ, ನೀಡಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಮೀರ್ ಮತ್ತು ನನ್ನ ಮಧ್ಯೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ. ಸಾಲದ ಹೊರತಾಗಿ ಹಣಕಾಸು ವ್ಯವಹಾರವೂ ಇಲ್ಲ. ಅವರಿಗೆ ಸಾಲ ನೀಡಿದ್ದರಿಂದ ತನಿಖೆ ಎದುರಿಸಬೇಕಾಗಿದೆ. ಇದರಲ್ಲಿ ನನಗೇನೂ ಬೇಸರವಿಲ್ಲ ಎಂದರು. ಇದೇ ಪ್ರಕರಣದ ವಿಚಾರವಾಗಿ ತನಿಖಾಧಿಕಾರಿಗಳು ನಟಿ ಮತ್ತು ನಿರ್ಮಾಪಕಿ ರಾಧಿಕಾ ಅವರಿಗೆ ನೋಟಿಸ್ ನೀಡಿದ್ದರು.
Advertisement