ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನ 30 ಕೆರೆಗಳನ್ನು ತುಂಬಿಸುವ ಕೋರಮಂಗಲ-ಚಲ್ಲಘಟ್ಟ (ಕೆಸಿ) ವ್ಯಾಲಿ ಹಂತ 2 ಯೋಜನೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಮಾತನಾಡಿದ ಸಿಎಂ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು 2013 ರಿಂದ 2018 ರ ನಡುವೆ ತಮ್ಮ ಮೊದಲ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು ಎಂದು ಹೇಳಿದರು. ಪ್ರತಿದಿನ 250 ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಡಿಸೆಂಬರ್ 2025 ರ ಅಂತ್ಯದ ವೇಳೆಗೆ, ಈ ಯೋಜನೆಯು ಒಟ್ಟು 272 ಕೆರೆಗಳನ್ನು ತುಂಬಲು ಸಾಧ್ಯವಾಗುತ್ತದೆ ಎಂದು ಸಿಎಂ ಹೇಳಿದರು.
ಧರ್ಮಸ್ಥಳದ ವಿಷಯವಾಗಿ ಕೇಳಿಬಂದ ಆರೋಪಗಳು, ಎಸ್ ಐಟಿ ತನಿಖೆ, ಅಪಪ್ರಚಾರ ವಿಚಾರವಾಗಿ ರಾಜ್ಯದ ವಿವಿಧ ಮಠಾಧೀಶರು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಕರಣದ ತನಿಖೆಯನ್ನು ರಾಜ್ಯದ ಎಸ್‌ಐಟಿಯಿಂದ ಕೇಂದ್ರದ ಎನ್ಐಎಗೆ ವರ್ಗಾಯಿಸಿಕೊಳ್ಳಬೇಕೆಂದು ಮಠಾಧೀಶರು ಮನವಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ಧರ್ಮಸ್ಥಳದ ಪ್ರಕರಣವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಸ್‌ಐಟಿ ತನಿಖೆಯನ್ನು ಯಾವ ಮಾರ್ಗದಲ್ಲಿ ಕೊಂಡ್ಯೊಯ್ಯುತ್ತಿದೆ ಎಂಬುದರ ಮಾಹಿತಿ ನಮಗಿದೆ. ಅಗತ್ಯ ಎದುರಾದಲ್ಲಿ ಖಂಡಿತಾ ನಾವು ಪ್ರವೇಶ ಮಾಡುತ್ತೆವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ನೂತನವಾಗಿ ರಚನೆಯಾಗಿರುವ 5 ನಗರ ಪಾಲಿಕೆಯ ಆಡಳಿತ ನಿರ್ವಹಣೆ, ಅಧಿಕಾರಿ ಸಿಬ್ಬಂದಿಯ 3 ತಿಂಗಳ ವೇತನಕ್ಕೆ 300 ಕೋಟಿ ರು. ಬಿಡುಗಡೆಯೊಂದಿಗೆ 500 ಎಂಜಿನಿಯರ್ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಚೇರಿಯ ನಾಮಫಲಕ ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಪಾಲಿಕೆಗಳ ನೂತನ ಕಚೇರಿಗೆ ಭೂಮಿಪೂಜೆಯನ್ನು ನವೆಂಬರ್.1 ರಂದು ನೆರವೇರಿಸಲಾಗುವುದು. ಆಡಳಿತಾತ್ಮಕ ವೆಚ್ಚಗಳು, ವೇತನ ಮತ್ತು ಪಿಂಚಣಿಗಳಿಗಾಗಿ ಸುಮಾರು 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮಹಿಳಾ ಪತ್ರಕರ್ತೆ ಪ್ರಶ್ನೆಗೆ ಶಾಸಕ ಆರ್.ವಿ ದೇಶಪಾಂಡೆ ಉಡಾಫೆಯಿಂದ ಉತ್ತರ ಕೊಟ್ಟಿರುವುದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆ ಸಮಸ್ಯೆ ಕುರಿತು ಪ್ರಶ್ನೆ ಕೇಳಿದ ಮಹಿಳಾ ಪತ್ರಕರ್ತೆಗೆ ಪ್ರತಿಕ್ರಿಯೆ ನೀಡಿದ್ದ ದೇಶಪಾಂಡೆ, ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ, ಚಿಂತಿಸಬೇಡ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಖಂಡನೆ ವ್ಯಕ್ತವಾಗಿದ್ದು, ಪತ್ರಕರ್ತರ ಸಂಘಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೇಶಪಾಂಡೆ ಹೇಳಿಕೆಯನ್ನು ಖಂಡಿಸಿದ್ದು, ಸ್ತ್ರೀಕುಲವನ್ನು ಅವಹೇಳನ ಮಾಡುವ ರೀತಿಯಲ್ಲಿ ನೀಡಿರುವ ಅವರ ಹೇಳಿಕೆಯನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲಾಗದು. ದೇಶಪಾಂಡೆ ಮಹಿಳಾ ಸಮುದಾಯದ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎನ್. ರಾಜಣ್ಣ, ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ 7ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ, 14 ಜನ ನಿರ್ದೇಶಕರನ್ನು ಒಳಗೊಂಡ ಆಡಳಿತ ಮಂಡಳಿ ರಾಜಣ್ಣ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ರಾಜಣ್ಣ ಅವರ ಆಯ್ಕೆ ತುಮಕೂರು ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಅವರ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ವೈದ್ಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಕಾಪು ತಾಲ್ಲೂಕು ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ– ರಮೇಶ್ ಮೂಲ್ಯ ದಂಪತಿ ಅಂಗನವಾಡಿಗೆ ಶಿಶುವನ್ನು ಕರೆದುಕೊಂಡು ಬಂದಿದ್ದರು. ಶಿಶು ದಂಪತಿಯದ್ದಲ್ಲ ಎಂಬ ಶಂಕೆ ಅಂಗನವಾಡಿ ಕಾರ್ಯಕರ್ತೆಗೆ ಬಂದಿದೆ. ವಿಚಾರಿಸಿದಾಗ, ಮಂಗಳೂರಿನಲ್ಲಿ ಶಿಶು ಖರೀದಿಸಿದ್ದಾಗಿ ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ (ಸಿಡಿಪಿಒ) ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಆಗಸ್ಟ್ 21 ರಂದು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement